LoksabhaElection2024: ಕರ್ನಾಟಕದಲ್ಲಿ #Voting ಮುಕ್ತಾಯ, ಚಾಮರಾಜನಗರದಲ್ಲಿ ಲಾಠಿ ಚಾರ್ಜ್, ಮತದಾನ ಬಹಿಷ್ಕರಿಸಿದ ಕೋಲಾರ ಗ್ರಾಮಸ್ಥರು-ಈ ದಿನದ ಸುದ್ದಿ ಮುಖ್ಯಾಂಶಗಳು-26-04-2024

ದೇಶಾದ್ಯಂತ ಲೋಕಸಭೆ ಚುನಾವಣೆಗೆ ಇಂದು ನಡೆದ ಎರಡನೇ ಹಂತದ ಮತದಾನ ಮುಕ್ತಾಯವಾಗಿದ್ದು, ಮತದಾನ ಬಹುತೇಕ ಶಾಂತವಾಗಿತ್ತು. ಚಾಮರಾಜನಗರದಲ್ಲಿ ಲಾಠಿ ಚಾರ್ಜ್ ಘಟನೆ ನಡೆದಿದ್ದು, ಕೋಲಾರದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಕರ್ನಾಟಕದಲ್ಲಿ ಮತದಾನ
ಕರ್ನಾಟಕದಲ್ಲಿ ಮತದಾನ

ದೇಶಾದ್ಯಂತ ಲೋಕಸಭೆ ಚುನಾವಣೆಗೆ ಇಂದು ನಡೆದ ಎರಡನೇ ಹಂತದ ಮತದಾನ ಮುಕ್ತಾಯವಾಗಿದ್ದು, ಮತದಾನ ಬಹುತೇಕ ಶಾಂತವಾಗಿತ್ತು. ಚಾಮರಾಜನಗರದಲ್ಲಿ ಲಾಠಿ ಚಾರ್ಜ್ ಘಟನೆ ನಡೆದಿದ್ದು, ಕೋಲಾರದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ.

1. ಮತದಾನ ಮುಕ್ತಾಯ

ದೇಶಾದ್ಯಂತ ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಇಂದು ನಡೆದಿದೆ. ಕರ್ನಾಟಕದಲ್ಲಿ ಇಂದು ನಡೆದ ಮೊದಲ ಹಂತದ ಮತದಾನದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 5 ಗಂಟೆಯವರೆಗೆ ಶೇಕಡಾ 63.90ರಷ್ಟು ಮತದಾನವಾಗಿದೆ. ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂತಿಅಂಶ ಪ್ರಕಾರ ಮಂಡ್ಯ ಕ್ಷೇತ್ರದಲ್ಲಿ ಶೇ.74.87, ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕನಿಷ್ಠ ಪ್ರಮಾಣದ ಅಂದರೆ, ಶೇ.48.61ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ 71.83, ಬೆಂಗಳೂರು ಉತ್ತರದಲ್ಲಿ ಶೇ.50.04, ಬೆಂಗಳೂರು ಗ್ರಾಮಾಂತರ 61.78, ಬೆಂಗಳೂರು ದಕ್ಷಿಣ 49.37, ಚಾಮರಾಜನಗರ 69.60, ಚಿಕ್ಕಬಳ್ಳಾಪುರ 70.97, ಚಿತ್ರದುರ್ಗ 67, ಹಾಸನ 72.13, ಕೋಲಾರ 71.26, ಮೈಸೂರು-ಕೊಡಗು 65.85, ತುಮಕೂರು 72.10 ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ. 72.13 ಮತದಾನವಾಗಿದೆ.

2. ಚಾಮರಾಜನಗರದಲ್ಲಿ ಲಾಠಿ ಚಾರ್ಜ್

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಕೆಲವು ಕಡೆ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟಿದ್ದ ಘಟನೆಗಳು ವರದಿಯಾಗಿವೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಗ್ರಾಮಸ್ಥರು ಮೂಲಭೂತ ಸೌಕರ್ಯದ ಕೊರತೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಮತಕೇಂದ್ರವನ್ನು ಸುತ್ತುವರೆದಿದ್ದ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರು, ಚುನಾವಣಾ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ, ಹಲ್ಲೆ ನಡೆಸಿದರು. ವಿದ್ಯುನ್ಮಾನ ಮತಯಂತ್ರಗಳನ್ನು ಧ್ವಂಸ ಮಾಡಿದರು. ಇನ್ನುಳಿದಂತೆ ಬಹುತೇಕ ಕಡೆ ಸರಾಗವಾಗಿ ಶಾಂತಿಯುತವಾಗಿಯೇ ಸಾಗಿತ್ತು.

3. ಮತದಾನ ಬಹಿಷ್ಕರಿಸಿದ ಕೋಲಾರ ಗ್ರಾಮಸ್ಥರು

ಮತ್ತೊಂದೆಡೆ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರ್ನಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ತಹಶೀಲ್ದಾರ್ ಹಾಗೂ ಶಾಸಕರು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಪಟ್ಟರೂ ವಿಫಲವಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಬರಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.

4. ಚುನಾವಣಾ ಸಿಬ್ಬಂದಿ ಸಾವು, ಮಹಿಳೆಗೆ ಹೃದಯ ಸ್ತಂಭನ

ರಾಜ್ಯದಲ್ಲಿ ಇಂದು ನಡೆದ ಮೊದಲ ಹಂತದ ಮತದಾನ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ. ಚಳ್ಳಕೆರೆ ಪಟ್ಟಣದ ವಿಠಲ ನಗರದ 55 ವರ್ಷದ ಯಶೋಧಮ್ಮ (55) ಮೃತ ಮಹಿಳಾ ಸಿಬ್ಬಂದಿ.

ಮತ್ತೊಂದೆಡೆ, ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನವಾಗಿದ್ದು, ಇದೇ ವೇಳೆ ಮತಹಕ್ಕು ಚಲಾಯಿಸಲು ಬಂದಿದ್ದ ವೈದ್ಯರೊಬ್ಬರು ಆಕೆಯ ಜೀವ ಉಳಿದ ಘಟನೆ ಬೆಂಗಳೂರಿನ ಜೆ.ಪಿ.ನಗರ 8 ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ನಡೆದಿದೆ.

5. ಮತಗಟ್ಟೆ ಸಮೀಪ ಧರೆಗುರುಳಿದ ಮರ

ಈಮಧ್ಯೆ, ಮತಗಟ್ಟೆ ಸಮೀಪ ಮರವೊಂದು ಧರೆಗುರುಳಿರುವ ಘಟನೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದಿದೆ. ಯಾರಿಗೂ ಅಪಾಯವಾಗಿಲ್ಲ.

6. ಮತದಾನ ಹೆಚ್ಚಿಸಲು ಹೊಟೆಲ್ ಗಳ 'Free' ಆಫರ್ ಗಳು!

ಅಲ್ಲದೆ, ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕೆಲವು ಹೋಟೆಲ್ ಗಳಲ್ಲಿ ಬೆಣ್ಣೆ ದೋಸೆ, ಫಿಲ್ಟರ್ ಕಾಫಿ ಮತ್ತಿತರ ಆಕರ್ಷಕ ಆಫರ್ ಗಳನ್ನು ನೀಡಲಾಯಿತು. ದೇಶದ ಪ್ರಜಾಸತ್ತಾತ್ಮಕ ಮನೋಭಾವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಆಸ್ಪತ್ರೆ ಚುನಾವಣಾ ಆಯೋಗ (ಇಸಿಐ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ 41 ರೋಗಿಗಳು ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಿತ್ತು. ಸ್ಪರ್ಶ್ ಆಸ್ಪತ್ರೆ ಸಹ ತನ್ನ ರೋಗಿಗಳು ಮತ ಚಲಾಯಿಸಲು ಅನುಕೂಲವಾಗುವಂತೆ ಸಾರಿಗೆ ಮತ್ತು ವೈದ್ಯಕೀಯ ನೆರವು ಒದಗಿಸಿತ್ತು.

7. ಸುಧಾಕರ್ ಗೆ IT ಶಾಕ್, ಪ್ರಕರಣ ದಾಖಲು, ಆಪ್ತರ ಮನೆ ಮೇಲೆ ದಾಳಿ

ಆಪ್ತನ ಮನೆಯಲ್ಲಿ 4.8 ಕೋಟಿ ರೂಪಾಯಿ ನಗದು ಹಣ ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ವಿರುದ್ಧ ಮತದಾರರಿಗೆ ಆಮಿಷ ಹಾಗೂ ಅನಗತ್ಯ ಪ್ರಭಾವದ ಆರೋಪದ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.

ಚಿಕ್ಕಬಳ್ಳಾಪುರದ ಫ್ಲೈಯಿಂಗ್ ಸ್ಕ್ವಾಡ್ಸ್ ತಂಡ (ಎಫ್‌ಎಸ್‌ಟಿ) ಕ್ರಮ ಕೈಗೊಂಡಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಸುಧಾಕರ್ ಆಪ್ತ ಹಾಗು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೂ ಆಗಿರುವ ಮಾದಾವರ ಗೋವಿಂದಪ್ಪ ಅವರ ನೆಲಮಂಗಲದ ನಿವಾಸದ ಮೇಲೆ ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com