ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ನಾವು ಕೇಳಿದ್ದು 18,172 ಕೋಟಿ ರೂ, ಕೇಂದ್ರ ಕೊಟ್ಟಿದ್ದು 3,454 ಕೋಟಿ ರೂ, ಇದು ಬಹಳ ಕಡಿಮೆ: ಸಿಎಂ ಸಿದ್ದರಾಮಯ್ಯ

Published on

ಕಲಬುರಗಿ: ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡಿರುವ ಬರ ಪರಿಹಾರ ಮೊತ್ತ ಬಹಳ ಕಡಿಮೆಯಾಗಿದೆ. ನಾವು ಕೇಳಿದ್ದು 18, 172 ಕೋಟಿ ರೂಪಾಯಿ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿನಲ್ಲಿಯೇ ಕೇಳಿದ್ದೆವು. ಕರ್ನಾಟಕದಲ್ಲಿ ಬರದಿಂದ ಆಗಿರುವ ಒಟ್ಟು ಬೆಳೆ ನಷ್ಟ 35 ಸಾವಿರ ಕೋಟಿ ರೂಪಾಯಿಗಳಷ್ಟು. ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಎನ್ ಡಿಆರ್ ಎಫ್ ನಿಯಮ ಪ್ರಕಾರ ನಾವು ಕೇಳಿದಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ಮೊತ್ತ ಬಿಡುಗಡೆಯ ಬಗ್ಗೆ ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರೆಲ್ಲ ಸುಳ್ಳು ಹೇಳಿದ್ದರು. ಕರ್ನಾಟಕ ಸರ್ಕಾರ ವಿಳಂಬವಾಗಿ ಮನವಿ ಕೊಟ್ಟಿದೆ ಎಂದರು. ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು ಎಂದು ಹೇಳಿ ಪರಿಹಾರ ವಿಳಂಬವಾಗುತ್ತಿದೆ ಎಂದು ಸುಳ್ಳು ಹೇಳಿಕೊಂಡು ಬಂದರು. ಬರಗಾಲಕ್ಕೆ ಬದಲು 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ಕೇಳುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಿಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರ ಕೊಂಚ ನಿರಾಳ: ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ

ನಾವು ಗ್ಯಾರಂಟಿಗಳ ಅನುಷ್ಠಾನಕ್ಕೆ ಕೇಂದ್ರದಿಂದ ಒಂದು ಪೈಸೆನೂ ಕೇಳಿಲ್ಲ, ಕೇಳುವುದೂ ಇಲ್ಲ. ಇಬ್ಬರೂ ಕೇಂದ್ರ ಸಚಿವರು ಸುಳ್ಳು ಹೇಳಿದರು. 2023ರ ಡಿಸೆಂಬರ್ 19ನೇ ತಾರೀಖಿನಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ. ಆಗ ಅವರು ಗೃಹ ಸಚಿವರ ನೇತೃತ್ವದಲ್ಲಿ ಉನ್ನತ ಸಮಿತಿಯಿದೆ, ಅವರ ಗಮನಕ್ಕೆ ತರುತ್ತೇನೆ ಎಂದರು. ನಂತರ ಡಿಸೆಂಬರ್ 20ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ಕರೆದಿದ್ದು ಅಂದು ಬರ ಪರಿಹಾರ ಬಿಡುಗಡೆಗೆ ಇತ್ಯರ್ಥ ಮಾಡುತ್ತೇನೆ ಎಂದರು.

ಈಗ ಸುಪ್ರೀಂ ಕೋರ್ಟ್ ಆದೇಶ ನೀಡಿದ ಮೇಲೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಇತಿಹಾಸದಲ್ಲಿಯೇ ಸುಪ್ರೀಂ ಕೋರ್ಟ್ ಈ ರೀತಿ ಬರ ಪರಿಹಾರ ಬಿಡುಗಡೆ ಮಾಡಲು ಆದೇಶ ನೀಡಿರುವುದು ಇದೇ ಮೊದಲು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತ ಬಹಳ ಕಡಿಮೆಯಾಗಿದೆ, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಲೋಕಸಭೆ ಚುನಾವಣೆಯ ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಇನ್ನು ಉಳಿದಿದ್ದು ಎರಡನೇ ಹಂತದ ಮತದಾನ. ಈ ಎರಡನೇ ಹಂತದ ಮತದಾನ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ನಡೆಯಲಿದೆ. . ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ. ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್​ ಪ್ರಚಾರಕರು ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ಕಾಂಗ್ರೆಸ್​ನ ಸ್ಟಾರ್​ ಪ್ರಚಾರಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯಲ್ಲಿ ಬೀಡು ಬಿಟ್ಟಿದ್ದಾರೆ.

ನಾಳೆ ಬೆಳಗಾವಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕೂಡ ಬೆಳಗಾವಿಗೆ ಆಗಮಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com