ಮದುವೆ ಆಹ್ವಾನ ಪತ್ರಿಕೆಯಲ್ಲಿ ಮೋದಿ ಗೆಲ್ಲಿಸುವಂತೆ ಮನವಿ: ಪ್ರಕರಣ ದಾಖಲು

ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ ಹಾಕುವಂತೆ ಸಂದೇಶ ಮುದ್ರಿಸಿದ್ದ ವರನ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ ಹಾಕುವಂತೆ ಸಂದೇಶ ಮುದ್ರಿಸಿದ್ದ ವರನ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಶಿವಪ್ರಸಾದ್ ಅಲಿಯಾಸ್ ರವಿ ಎಪ್ರಿಲ್ 18 ರಂದು ಕಡಬ ತಾಲೂಕಿನ ಗೋಳಿತೊಟ್ಟು ಎಂಬಲ್ಲಿ ವಿವಾಹವಾಗಿದ್ದರು.

ಮಾರ್ಚ್ 1 ರಂದು ಅವರು ಮುದ್ರಿಸಿದ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ, ರವಿ ತಮ್ಮ ಸಂಬಂಧಿಕರು ಮತ್ತು ಇತರ ಅತಿಥಿಗಳಿಗೆ ಮದುವೆಗೆ ತಾವು ನೀಡಬಹುದಾದ ದೊಡ್ಡ ಉಡುಗೊರೆ ಎಂದರೆ ಬಲಿಷ್ಠ ಭಾರತಕ್ಕಾಗಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡುವುದು ಎಂದು ಸಂದೇಶ ಮುದ್ರಿಸಿದ್ದರು.

ಸಾಂದರ್ಭಿಕ ಚಿತ್ರ
ಪ್ರಧಾನಿ ಮೋದಿ ಹೇಳಿಕೆಗೆ ವಿರೋಧ; ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮಾಜಿ ಮುಖ್ಯಸ್ಥರ ಬಂಧನ

ಆಮಂತ್ರಣ ಪತ್ರಿಕೆಯಲ್ಲಿನ ಸಂದೇಶದ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಏಪ್ರಿಲ್ 14 ರಂದು ರವಿ ಅವರ ಮನೆಗೆ ಭೇಟಿ ನೀಡಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ರವಿ ಅವರು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ ಎಂದು ಅವರಿಗೆ ತಿಳಿಸಿದ್ದಾರೆ.

ರವಿ ಅವರು ಸುಮಾರು 750 ಆಮಂತ್ರಣ ಪತ್ರಿಕೆಗಳನ್ನು ವಿತರಿಸಿದ್ದು, ಸಂದೇಶವನ್ನು ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸದಂತೆ ಲಿಖಿತ ಬರವಣಿಗೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 26 ರಂದು ಮತದಾನ ನಡೆದ ಬಳಿಕ ಚುನಾವಣಾಧಿಕಾರಿಗಳು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಆಮಂತ್ರಣ ಪತ್ರಿಕೆ ಮುದ್ರಿಸಿದವರನ್ನೂ ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಬಿಜೆಪಿ ಕಿಡಿ

ಈ ನಡುವೆ ಪ್ರಕರಣ ದಾಖಲಿಸಿರುವ ಸಂಬಂಧ ಬಿಜೆಪಿ ಕಿಡಿ ಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಯವರ ಭಾವಚಿತ್ರ ಪ್ರಕಟಿಸಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಕೋರಿದ್ದಾರೆ. ಆದರೆ, ಸಿದ್ದರಾಮಯ್ಯ ಸರ್ಕಾರ ಇದರ ಮೇಲೂ ಕಳ್ಳಗಣ್ಣು ಬಿಟ್ಟು ದೂರು ದಾಖಲಿಸಿದೆ. ರಾಜ್ಯದಲ್ಲಿ ಪ್ರಧಾನಿ ಮೋದಿಯವರಿಗೆ ಸಿಗುತ್ತಿರುವ ವ್ಯಾಪಕ ಬೆಂಬಲ ನೋಡಿ ಕಾಂಗ್ರೆಸ್ಸಿಗರ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ ಹೇಡಿ ಸರ್ಕಾರ ಎಂದು ಕಿಡಿಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com