
ಬೆಳಗಾವಿ: ರಾಜ್ಯದಲ್ಲಿ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಹರಿದಾಡುತ್ತಿವೆ. ಹಾಸನದ ಹಾಲಿ ಸಂಸದರಿಂದ ಅಧಿಕಾರ ದುರುಪಯೋಗ ಆಗಿದೆ. 16ರಿಂದ 50 ವರ್ಷ ವಯಸ್ಸಿನ 300ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆದ ನೀಚ ಕೃತ್ಯವನ್ನು ಬಿಜೆಪಿಗರು ಖಂಡಿಸುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಅನ್ಯಾಯವಾದಾಗ, ಬಿಜೆಪಿ ನೈತಿಕ ಬಲ ತುಂಬುತ್ತದೆ. ನ್ಯಾಯ ಕೋರಿ ಹೋರಾಟಕ್ಕೆ ಇಳಿಯುತ್ತದೆ. ಆದರೆ, ನೂರಾರು ಮಹಿಳೆಯರಿಗೆ ಅನ್ಯಾಯವಾಗಿರುವ ಈ ಪ್ರಕರಣದ ಕುರಿತಾಗಿ ಆ ಪಕ್ಷದ ಯಾವ ನಾಯಕರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಇದು ಇಡೀ ಸಮಾಜವೇ ತಲೆ ತಗ್ಗಿಸುವಂಥ ಘಟನೆ. ಬಿಜೆಪಿ ಮುಖಂಡ ದೇವರಾಜಗೌಡ ಮತ್ತು ಮಾಜಿ ಶಾಸಕ ಪ್ರೀತಮ್ ಗೌಡ ಅವರು, ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿಳಿಸಿದ್ದರು. ಆದರೆ, ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.
ಪ್ರಜ್ವಲ್ ಅವರಿಂದ ಎಷ್ಟು ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂಬುದು ತನಿಖೆ ನಂತರವೇ ತಿಳಿಯಲಿದೆ. ಅವರು ಸಂಸದರಾಗಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರೆ ಆಮಿಷವೊಡ್ಡಿ ಮೋಸ ಮಾಡಿದ್ದಾರೆಯೇ ಎಂಬುದನ್ನು ನೋಡಬೇಕಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದಾಗ, ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟಿಸಿದ್ದರು. ಆದರೆ, ಪ್ರಜ್ವಲ್ ಕರ್ಮಕಾಂಡದ ವಿಷಯ ಬಂದಾಗ ಅದೇ ನಾಯಕರು ಕುರುಡರು ಮತ್ತು ಕಿವುಡರಂತೆ ವರ್ತಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
Advertisement