ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ರೇವಣ್ಣ ಅಮಾನತಿಗೆ ಜೆಡಿಎಸ್ ಶಾಸಕ ಕಂದಕೂರು ಆಗ್ರಹ!
ಬೆಂಗಳೂರು: ಹಾಸನದ ಹಾಲಿ ಸಂಸದ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದ್ದು, ಈ ನಡುವೆ ಪ್ರಜ್ವಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಜೆಡಿಎಸ್ ಶಾಸಕರೊಬ್ಬರು ಒತ್ತಾಯ ಮಾಡಿದ್ದಾರೆ.
ಪ್ರಜ್ವಲ್ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಕೆಲ ದಿನಗಳಿಂದ ಹರದಾಡುತ್ತಿರುವ ವಿಡಿಯೋದಿಂದ ಮುಜುಗರವಾಗಿದೆ. ಈ ವಿಡಿಯೋಗಳಲ್ಲಿ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ತಪ್ಪಿತಸ್ಥರು ಎಂಬ ಭಾವನೆ ಉಂಟಾಗಿದೆ. ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾ ಬಂದಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ ಮಾಡಿದ್ದರು. ಲಾಟರಿ ನಿಷೇಧಿಸಿ ಹೆಣ್ಣು ಮಕ್ಕಳ ಪುಣ್ಯಕ್ಕೆ ಪಾತ್ರರಾಗಿದ್ದಾರೆ. ಪಕ್ಷದ ಚಿಹ್ನೆಯಲ್ಲಿ ಭತ್ತದ ತೆನೆಹೊತ್ತ ಮಹಿಳೆಯ ಚಿತ್ರ ಇದೆ. ಭತ್ತದ ತೆನೆಹೊತ್ತ ಮಹಿಳೆಯ ಚಿತ್ರ ಹೆಣ್ಣಿನ ಗೌರವವನ್ನ ಪ್ರತಿಪಾದಿಸುತ್ತೆ. ಇಂತಹ ಪರಂಪರೆ ಹೊಂದಿರುವ ಪಕ್ಷಕ್ಕೆ ಮುಜುಗರ ತಂದಿರುವುದು ಸುಳ್ಳಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿದೆ. ಪಕ್ಷ ಕೂಡ ಆಂತರಿಕ ಸಮಿತಿ ರಚನೆ ಮಾಡಿ ಸತ್ಯಾಸತ್ಯ ತಿಳಿಸಬೇಕು. ಈ ಪ್ರಕರಣದಿಂದ ಸದ್ಯ ಜೆಡಿಎಸ್ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪಕ್ಷದ ಮುಜುಗರ ತಪ್ಪಿಸಲು ಪ್ರಜ್ವಲ್ರನ್ನ ಅಮಾನತುಗೊಳಿಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ