
ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸುವ ಮಸೂದೆ ಜಾರಿಗೆ ಸರ್ಕಾರ ದೃಢವಾಗಿ ನಿಲ್ಲಬೇಕು ಎಂದು ಕರ್ನಾಟಕದ ಲೇಖಕರು ಮತ್ತು ಚಿಂತಕರು ಬುಧವಾರ ಒತ್ತಾಯಿಸಿದ್ದಾರೆ.
ಕನ್ನಡಿಗರಿಗೆ ಮೀಸಲಾತಿಗಾಗಿ ರಾಜ್ಯ ಸರ್ಕಾರದ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸುತ್ತಿರುವ ಕಾರ್ಪೊರೇಟ್ ವಲಯದ ವಿರುದ್ಧ ಕನ್ನಡ ಸಾಹಿತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಹಿತಿ ಹಂಪ ನಾಗರಾಜಯ್ಯ, ಮಾಜಿ ಸಂಸದ ಹನುಮಂತಯ್ಯ, ಚಿತ್ರ ನಿರ್ಮಾಪಕ ಟಿ.ಎಸ್.ನಾಗಾಭರಣ, ಮನು ಬಳಿಗಾರ್ ಮತ್ತಿತರರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಸೂದೆಯನ್ನು ಪ್ರಶ್ನಿಸಿರುವ ಉದ್ಯಮಿ ಮೋಹನ್‌ದಾಸ್ ಪೈ ಸೇರಿದಂತೆ ಪ್ರಮುಖರ ಅಭಿಪ್ರಾಯಗಳನ್ನು ಖಂಡಿಸಿದರು.
“ಯಾವುದೇ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶವು ಅದರ ಸುತ್ತಮುತ್ತಲಿನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವುದಾಗಿದೆ. ಆ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ’ ಎಂದು ಚಿಂತಕರು ಒಕ್ಕೊರಲಿನಿಂದ ಹೇಳಿದ್ದು, ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ದುರದೃಷ್ಟಕರ ಎಂದಿದ್ದಾರೆ.
ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಕೂಡಲೇ ಈ ಮಸೂದೆ ಜಾರಿಗೊಳಿಸಬೇಕು ಎಂದು ಚಿಂತಕರು ಒತ್ತಾಯಿಸಿದ್ದು, ಈ ಮಸೂದೆಯು ಕನ್ನಡಿಗರ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತದೆ ಮತ್ತು ಮೀಸಲಾತಿಯ ನಂತರ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡುವ ಉದ್ದೇಶ ಇಲ್ಲ. ಉಳಿದ ಹುದ್ದೆಗಳನ್ನು ಇತರ ಭಾಷೆಗಳನ್ನು ಮಾತನಾಡುವ ಎಲ್ಲರಿಗೂ ಮುಕ್ತವಾಗಿವೆ ಎಂದಿದ್ದಾರೆ.
ಮಸೂದೆಯಲ್ಲಿ ಕರ್ನಾಟಕದಲ್ಲಿ ಹುಟ್ಟಿ ಕಳೆದ 15 ವರ್ಷಗಳಿಂದ ಇಲ್ಲಿ ನೆಲೆಸಿರುವ, ಕನ್ನಡ ಓದಲು ಮತ್ತು ಬರೆಯಲು ಬಲ್ಲ ವ್ಯಕ್ತಿಯನ್ನು ‘ಕನ್ನಡಿಗ’ ಎಂದು ವ್ಯಾಖ್ಯಾನಿಸಲಾಗಿದೆ.
Advertisement