Belagavi factory fire: 14 ತಾಸು ಕಾರ್ಯಾಚರಣೆ ಬಳಿಕ ಕಾರ್ಮಿಕನ ಶವ ಪತ್ತೆ, ಮೂವರ ಸ್ಥಿತಿ ಗಂಭೀರ

ಮೆಡಿಕಲ್ ಟೇಪಗಳನ್ನು‌ ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ‌ ಹೊತ್ತಿಕೊಂಡಿತು. ಆಗ ಒಳಗಡೆ ಇದ್ದ ಹಲವು ಅಗ್ನಿ‌ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು.
Belagavi factory fire
ಬೆಳಗಾವಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ
Updated on

ಬೆಳಗಾವಿ: ಬೆಳಗಾವಿ ಹೊರವಲಯದ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಓರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಳಗಾವಿಯ ನಾವಗೆ ಗ್ರಾಮದಲ್ಲಿ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಿಕ್ಕಿಕೊಂಡಿದ್ದ ಕಾರ್ಮಿಕನ ದೇಹ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ಕಾರ್ಮಿಕನನ್ನು ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ (20) ಎಂದು ಗುರುತಿಸಲಾಗಿದೆ.

ಮೆಡಿಕಲ್ ಟೇಪಗಳನ್ನು‌ ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ‌ ಹೊತ್ತಿಕೊಂಡಿತು. ಆಗ ಒಳಗಡೆ ಇದ್ದ ಹಲವು ಅಗ್ನಿ‌ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು. ಬೆಂಕಿಯಲ್ಲಿ ಬೆಂದ ಮೂವರನ್ನು ಹೊರಕ್ಕೆ ಎಳೆತಂದು ರಕ್ಷಿಸಲಾಯಿತು. ಆದರೆ, ಯಲ್ಲಪ್ಪ ಲಿಫ್ಟಿನಲ್ಲಿ ಸಿಕ್ಕಿಕೊಂಡಿದ್ದರು. ಲಿಫ್ಟನಲ್ಲೇ ಮೊದಲು ಬೆಂಕಿ‌ ಹೊತ್ತಿಕೊಂಡಿದ್ದರಿಂದ ಯಲ್ಲಪ್ಲ ಪಾರಾಗಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ನೇಹಂ ಹೆಸರಿನ ಈ ಕಾರ್ಖಾನೆಯಲ್ಲಿ ಮೂರು ಶಿಫ್ಟ್‌ಗಳಲ್ಲಿ ತಲಾ 74 ಕಾರ್ಮಿಕರು ಕೆಲಸ ಮಾಡುತ್ತಿದ್ದರು.

14 ಗಂಟೆ ಕಾರ್ಯಾಚರಣೆ ಬಳಿಕ ಮೃತದೇಹ ಹೊರಕ್ಕೆ

ಇನ್ನು ಬೆಂಕಿಯ ಕೆನ್ನಾಲಿಗೆ ಎಷ್ಟು ಭೀಕರವಾಗಿದೆ ಎಂದರೆ ಆರು ಅಗ್ನಿಶಾಮಕ ವಾಹನಗಳು, ಹಲವು ಸಿಬ್ಬಂದಿ ರಾತ್ರಿ ಇಡೀ ಕಾರ್ಯಾಚರಣೆ ಮಾಡಿದರೂ ಬೆಂಕಿ ಹತೋಟಿಗೆ ಬರಲಿಲ್ಲ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಟ್ಟಡದ ಗೋಡೆ, ಕಿಟಕಿಗಳನ್ನು ಜೆಸಿಬಿ ಯಂತ್ರದಿಂದ ಒಡೆದು ಹಾಕಿ ಒಳಗೆ ನೀರು ಚಿಮ್ಮಿಸಿ ಬೆಂಕಿ‌ ನಂದಿಸಲು ಯತ್ನಿಸಲಾಯಿತು. ಬಳಿಕ ಲಿಫ್ಟ್ ನಲ್ಲಿದ್ದ ಯಲ್ಲಪ್ಪ ಅವರ ಮೃತದೇಹವನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರ ಸ್ಥಿತಿ ಗಂಭೀರ

ಕಾರ್ಮಿಕರಾದ ಬೆಳಗಾವಿ ತಾಲ್ಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35), ರಾಝವಾಡಿಯ ರಂಜೀತ ದಶರಥ ಪಾಟೀಲ (39) ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂವರ‌ ಸ್ಥಿತಿಯೂ ಚಿಂತಾಜನಕವಾಗಿದ್ದು, ಹೆಚ್ಚಿ‌ನ ಚಿಕಿತ್ಸೆಗೆ ಕೆಎಲ್ಇ ಆಸ್ಪತ್ರೆಗೆ ಸಾಗಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com