ಬೆಂಗಳೂರು: ಕರ್ನಾಟಕದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ (ಕನ್ನಡಿಗರಿಗೆ) ಮೀಸಲು ಕಲ್ಪಿಸುವ ಉದ್ದೇಶಿತ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನಗರದ ಬಿಳೇಕಹಳ್ಳಿಯ ಲೆಕ್ಕ ಪರಿಶೋಧಕಿ ಡಾ.ಆರ್. ಅಮೃತಲಕ್ಷ್ಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಮಾದರಿಯ ಕಾನೂನನ್ನು ಹರಿಯಾಣ ಸರ್ಕಾರ ರಚನೆ ಮಾಡಿದೆ, ಪಂಜಾಬ್-ಹರ್ಯಾಣ ಹೈಕೋರ್ಟ್ ಈ ಕಾನೂನು ರದ್ದುಪಡಿಸಿತ್ತು ಎಂದರು.
ನ್ಯಾಯಪೀಠ ಅರ್ಜಿಯನ್ನು ಪರಿಶೀಲನೆ ಮಾಡಿ ಹರಿಯಾಣ ಸರ್ಕಾರ ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿ ಕಾಯ್ದೆಯನ್ನು ರೂಪಿಸಿತ್ತು. ಕರ್ನಾಟಕದಲ್ಲಿ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ಸದ್ಯ ಕರಡು ಸ್ವರೂಪದಲ್ಲಿದ್ದು, ಕಾನೂನು ಮಾನ್ಯತೆ ಪಡೆದಿಲ್ಲ ಎಂದು ಹೇಳಿತು. ಬಳಿಕ ಅರ್ಜಿಯನ್ನು ವಜಾಗೊಳಿಸಿತು.
Advertisement