ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಮ್ಮ 73ನೇ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿಕೊಂಡಿದ್ದು, ಈ ವೇಳೆ ಬೆಂಬಲಿಗರು ಮುಂದಿನ ಸಿಎಂ ಪರಮೇಶ್ವರ್ ಎಂದು ಘೋಷಣೆ ಕೂಗಿದ್ದು ಕಂಡು ಬಂದಿತು.
ಆಗಸ್ಟ್ 3 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುಟ್ಟುಹಬ್ಬವವನ್ನು ಯಾವುದೇ ದೊಡ್ಡ ಕಾರ್ಯಕ್ರಮಗಳಿಲ್ಲದೆ, ಸರಳವಾಗಿ ಆಚರಿಸಿಕೊಂಡರು. ಆದರೆ, ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿ ಗೃಹ ಸಚಿವ ಪರಮೇಶ್ವರ್ ಅವರ ಹುಟ್ಟುಹಬ್ಬ ತುಮಕೂರಿನ ಗೊಲ್ಲಹಳ್ಳಿಯಲ್ಲಿರುವ ಅವರ ನಿವಾಸದಲ್ಲಿ ಭರ್ಜರಿಯಾಗಿ ಆಚರಿಸಲಾಯಿತು. ಸ್ಥದವ್ಲಿ ಭಾರೀ ಜನಸ್ತೋಮ ನೆರೆದಿದ್ದು ಕಂಡು ಬಂದಿತು,
ಪಿಸಿಸಿ ಪ್ರಧಾನ ಕಾರ್ಯದರ್ಶಿ ಬೊಳ್ಳು ಕಿಶನ್ ನೇತೃತ್ವದ ತೆಲಂಗಾಣದ ಕಾಂಗ್ರೆಸ್ ತಂಡ ಬೃಹತ್ ಕೇಕ್ ನ್ನು ಪರಮೇಶ್ವರ್ ಅವರಿಂದ ಕತ್ತರಿಸಿ, ಸಂಭ್ರಮ ಆಚರಿಸಿತು. ಈ ವೇಳೆ ಬೆಂಬಲಿಗರು ಡಾ.ಪರಮೇಶ್ವರ ಅವರು ಮುಂದಿನ ಸಿಎಂ ಆಗಲಿ ಎಂದು ಹಾರೈಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕಾರ್ಯಾಧ್ಯಕ್ಷ ಪುರುಷೋತ್ತಮ್ ಸೇರಿದಂತೆ ಹಾಜರಿದ್ದ ಬಹುತೇಕರು ಡಾ.ಪರಮೇಶ್ವರ ಅವರು ಮುಂದಿನ ಸಿಎಂ ಆಗಲು ಅರ್ಹರು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪರಮೇಶ್ವರ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಿ, ಹಾರೈಸಲು ಬಂದಿದ್ದ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ ಅವರು ಸಂಭ್ರಮಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.
ಬಳಿಕ ಬೆಂಗಳೂರಿನಲ್ಲಿರುವ ಡಾ.ಪರಮೇಶ್ವರ ಅವರ ನಿವಾಸಕ್ಕೆ ಸಚಿವರಾದ ಎನ್.ಎಸ್.ಬೋಸರಾಜು, ಪ್ರಿಯಾಂಕ್ ಖರ್ಗೆ ಸೇರಿದಂತೆ ಮುಖಂಡರ ದಂಡು ಭೇಟಿ ನೀಡಿತು.
ಬಿಜೆಪಿಯ ಮಾಜಿ ಸಚಿವ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್, ಎಸಿ ಶ್ರೀನಿವಾಸ್, ಆನೇಕಲ್ ಶಿವಣ್ಣ, ಪ್ರಸಾದ್ ಅಬ್ಬಯ್ಯ ಸೇರಿದಂತೆ ಹಲವು ಶಾಸಕರು ಡಾ.ಪರಮೇಶ್ವರ ಅವರನ್ನು ಭೇಟಿ ಮಾಡಿ, ಶುಭಾಶಯ ಕೋರಿದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಹುಬ್ಬಳ್ಳಿ ಮತ್ತು ದಾವಣಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡಾ.ಪರಮೇಶ್ವರ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಈ ವೇಳೆ ಬೆಂಬಲಿಗರು ‘ಮುಂದಿನ ಸಿಎಂ ಪರಮೇಶ್ವರ’ ಘೋಷಣೆಗಳನ್ನು ಕೂಗುವ ಮೂಲಕ ಸ್ವಾಗತಿಸಿದ್ದರು.
Advertisement