ಸ್ವಾತಂತ್ರ್ಯೋತ್ಸವ ದಿನ: ಅಂಗಾಂಗ ದಾನ ಮಾಡಿದ 80 ಮಂದಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ
ಬೆಂಗಳೂರು: ಅಂಗಾಂಗ ದಾನ ಮಾಡಿದ 80 ಮಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೀಲ್ಡ್ ಮಾರ್ಷಲ್ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನಿಸಲಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾರ ಮಾಹಿತಿ ನೀಡಿದರು.
ಈ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸನ ವ್ಯವಸ್ಥೆಯಲ್ಲಿ ಗೊಂದಲ ಬೇಡ, ಯಾವ ಗೇಟ್ ಮೂಲಕ ಯಾರಿಗೆ ಪ್ರವೇಶ, ಪಾರ್ಕಿಂಗ್ ವ್ಯವಸ್ಥೆ, ಮಾರ್ಗ ಬದಲಾವಣೆ ಮತ್ತಿತರ ವ್ಯವಸ್ಥೆ ಕಲ್ಪಿಸಬೇಕು ಎಂಬುದರ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಮೈದಾನದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಬೇಕು. ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ತಾಲೀಮು ವೇಳೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಸ ತುಂಬಿದ ಖಾಲಿ ಸೈಟ್: ಪಾಲಿಕೆಯಿಂದಲೇ ಸ್ವಚ್ಛತೆ, ಆಸ್ತಿ ತೆರಿಗೆ ಜೊತೆ ಶುಲ್ಕ ವಸೂಲಿ
ಈ ನಡುವೆ ಕಸ ತುಂಬಿದ ಖಾಲಿ ಸೈಟ್ ಗಳನ್ನು ಸ್ವಚ್ಛಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಇದರ ದಂಡವನ್ನು ಆಸ್ತಿ ತೆರಿಗೆಯೊಂದಿಗೇ ವಸೂಲಿ ಮಾಡಲು ನಿರ್ಧಾರ ಕೈಗೊಂಡಿದೆ.
ಈ ಸಂಬಂಧ ಬಿಬಿಎಂಪಿ ಆದೇಶ ಹೊರಡಿಸಿದ್ದು, ಆದೇಶದಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016, ಘನತ್ಯಾಜ್ಯ ನಿರ್ವಹಣಾ ಬೈಲಾಗಳು 2020 ಮತ್ತು ಬಿಬಿಎಂಪಿ ಕಾಯಿದೆ 2020 ಅನುಸರಿಸುವಲ್ಲಿ ಮಾಲೀಕರು ವಿಫಲವಾದರೆ, ವಲಯ ಆಯುಕ್ತರು ದಂಡದ ಮೇಲೆ ಬಡ್ಡಿಯನ್ನು ವಿಧಿಸಲು ಮುಕ್ತರಾಗಿದ್ದಾರೆ ಮತ್ತು ಸೈಟ್‌ಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಶುಲ್ಕ ವಿಧಿಸಬಹುದುಯ ಬಿಬಿಎಂಪಿ ಸೂಚನೆ ಪಡೆದ ನಂತರ ಮಾಲೀಕರು ಒಂದು ವಾರದೊಳಗೆ ತಮ್ಮ ಸೈಟ್‌ಗಳಿಂದ ಎಲ್ಲಾ ಕಸವನ್ನು ತೆಗೆದು, ಸ್ವಚ್ಛಗೊಳಿಸಬೇಕೆಂದು ಸೂಚಿಸಲಾಗಿದೆ.


