
ಬೆಂಗಳೂರು: ಬೆಂಗಳೂರಿನ ಬಸವನಗುಡಿ ವಾರ್ಡ್‌ಗೆ ದೊಡ್ಡ ಗಣಪತಿ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಬಸವನಗುಡಿ ವಾರ್ಡ್ ಮರುನಾಮಕರಣದ ವಿರುದ್ಧ ಸತ್ಯಲಕ್ಷ್ಮಿ ರಾವ್ ಮತ್ತು ಇತರರು PIL ಸಲ್ಲಿಸಿದ್ದು, ಮೂಲ ಹೆಸರು ಗಮನಾರ್ಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ ಎಂದು ವಾದಿಸಿದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ, ''ವಾರ್ಡ್ ಅಥವಾ ನಗರವನ್ನು ಮರುನಾಮಕರಣ ಮಾಡುವ ವಿಷಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದ ವಿಷಯವಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಬಸವನಗುಡಿ ವಾರ್ಡ್ ಮರುನಾಮಕರಣ ಮಾಡಿ 2023ರ ಸೆಪ್ಟೆಂಬರ್ 25ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ನ್ಯಾಯಾಲಯ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ವಾರ್ಡ್ ಗಡಿಗಳನ್ನು ಮರುವಿನ್ಯಾಸಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ಈಗಾಗಲೇ ಬೆಂಗಳೂರಿನ ಹಲವಾರು ವಾರ್ಡ್‌ಗಳಿಗೆ ಮರುನಾಮಕರಣ ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
Advertisement