ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮಂಗಳವಾರ ಮತ್ತೊಂದು ದೂರು ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ದೂರನ್ನು ರಾಜ್ಯಪಾಲರ ಕಚೇರಿ ಸ್ವೀಕರಿಸಿದೆ. ರಾಜ್ಯಪಾಲರ ಹೆಸರಿನಲ್ಲಿ ಅಕ್ರಮ ಪರಿತ್ಯಾಜನ ಪತ್ರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಕೆ. ಸಿ. ಉಮೇಶ್ ಅವರು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರ 3.16 ಎಕರೆ ಜಮೀನು ಸಂಬಂಧ ಪರಿತ್ಯಾಜನ ಪತ್ರ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
25-11-2021ರಲ್ಲಿ ಅಕ್ರಮವಾಗಿ ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ನೋಂದಣಿಯಾಗಿದೆ. ಪಾರ್ವತಿಯವರು ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ಮಾಡಿಕೊಟ್ಟಿದ್ದಾರೆ. ಕೂಡಲೇ ಉಮೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರಾಜ್ಯಪಾಲರ ಹೆಸರಿನಲ್ಲಿ ಪರಿತ್ಯಾಜನ ಪತ್ರವನ್ನು ನೋಂದಾಯಿಸಿ ಕೊಂಡಿದ್ದಾರೆ. ಕೂಡಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಕೆ ಸಿ ಉಮೇಶ್ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ, ಸದರಿಯವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಿಂದ ನಿಮ್ಮ ಪರವಾಗಿ ನೋಂದಾಯಿಸಿಕೊಂಡಿರುವ ಎಲ್ಲ ಪರಿತ್ಯಾಜನ ಪತ್ರಗಳನ್ನು ಕೂಡಲೇ ರದ್ದು ಪಡಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತುರ್ತು ಸೂಚನೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ, ಸೆಪ್ಟೆಂಬರ್ 30, 2020 ರಂದು, ಕರ್ನಾಟಕ ನಗರಾಭಿವೃದ್ಧಿ ಇಲಾಖೆಯು ರಾಜ್ಯಪಾಲರ ಹೆಸರಿನಲ್ಲಿ ಮಾಲೀಕರಿಂದ ನೇರವಾಗಿ ಕೃಷಿ ಭೂಮಿಯನ್ನು ಹಸ್ತಾಂತರಿಸುವ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡುವ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ. ಕಂದಾಯ ಕಾಯ್ದೆ ಪ್ರಕಾರ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ ನಂತರವೇ ರಾಜ್ಯಪಾಲರಿಗೆ ಭೂಮಿ ಹಸ್ತಾಂತರಿಸುವಾಗ ಸ್ಥಳೀಯ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಅಂಶಗಳನ್ನು ಪರಿಗಣಿಸಿದರೆ ಸರ್ಕಾರದ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಪವಾಗಿದ್ದು, ನಿಮ್ಮ ಹೆಸರಲ್ಲಿ ಅಕ್ರಮ ನಡೆದಿರುವುದರಿಂದ ಗಂಭೀರವಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಬಂಧಿತ ಅಧಿಕಾರಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು ಎಂದು ಹೇಳಿರುವ ಸ್ನೇಹಮಯಿ ಕೃಷ್ಣ, ಮುಂದೆ ಯಾವುದೇ ಸರ್ಕಾರಿ ಅಧಿಕಾರಿಗಳು ರಾಜ್ಯಪಾಲರ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ದಾಖಲಾಗಿರುವ ಮೂರನೇ ದೂರು ಇದಾಗಿದೆ. ಎರಡು ಪ್ರಕರಣಗಳಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ಇತ್ತೀಚಿನ ದೂರಿನಲ್ಲಿ ಸಹಿ ಮಾಡಿರುವವರು ಅವರ ಪತ್ನಿಯೇ ಆಗಿರುವುದರಿಂದ ಪರೋಕ್ಷವಾಗಿ ಅವರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಮೂರರಲ್ಲಿ ಎರಡು ದೂರುಗಳು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿವೆ ಮತ್ತು ಇನ್ನೊಂದು ಡಿ-ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದೆ.
Advertisement