ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಗಂಡ-ಹೆಂಡತಿ ಹಾಗೂ ಪುತ್ರಿ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಶ್ರೀನಿವಾಸ್(43), ಶ್ವೇತಾ(36) ಹಾಗೂ ಅವರ ಮಗಳು ನಾಗಶ್ರೀ(13) ಎಂದು ಗುರುತಿಸಲಾಗಿದೆ.
ಮೃತ ಶ್ರೀನಿವಾಸ್ ಕಾರು ಚಾಲಕನಾಗಿದ್ದರು ಮತ್ತು ಅವರ ಪತ್ನಿ ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಈ ಮೂವರು ಕಳೆದ ಮಂಗಳವಾರದಿಂದ ಕಾಣಿಯಾಗಿದ್ದರು. ಕುಟುಂಬಸ್ಥರು ಇವರಿಗಾಗಿ ಎಲ್ಲೆಡೆ ಹುಡುಕಾಡಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ನಂತರ ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಹುಡುಕಾಟ ನಡೆಸಿದಾಗ ನಿನ್ನೆ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಸ್ಮೀತಾ ಶವ ಪತ್ತೆಯಾಗಿದೆ.
ಹೇಮಾವತಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪತಿ ಹಾಗೂ ಪತ್ನಿಯ ಶವ ಪತ್ತೆಯಾಗಿದ್ದು ಬಾಲಕಿ ನಾಗಶ್ರೀ ಮೃತದೇಹ ಇನ್ನೂ ಪತ್ತೆ ಆಗಿಲ್ಲಿ. ಹೀಗಾಗಿ ನಾಗಶ್ರೀ ದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement