
ಹೊಸಪೇಟೆ(ಬಳ್ಳಾರಿ): ತುಂಗಭದ್ರಾ ಜಲಾಶಯ (Tungabhadra Dam) ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಜಾಗಕ್ಕೆ ನಿನ್ನೆ ಸ್ವಾತಂತ್ರ್ಯ ದಿನಾಚರಣೆ ದಿನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಕೆಲಸಗಾರರ ಜೊತೆ ಮಾತನಾಡಿ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಈ ವೇಳೆ ಕೆಲಸಗಾರರಿಗೆ ಅವರು, ನೀವು ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ. ನಾಳೆ ಗೇಟ್ ಕೂಡಿಸಿ ಕಾರ್ಯ ಯಶಸ್ವಿ ಮಾಡಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂಪಾಯಿ ಕೊಡುತ್ತೇನೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಬೆನ್ನುತಟ್ಟಿದರು.
ಸ್ಟಾಪ್ ಲಾಗ್ ಗೇಟ್ ಕೂರಿಸಲು ಕನ್ನಯ್ಯ ಮತ್ತು ತಂಡದ ಸದಸ್ಯರು ಇಂದು ಹರಸಾಹಸ ಪಡುತ್ತಿದ್ದಾರೆ. ಸ್ಟಾಪ್‌ಲಾಗ್‌ಗಳನ್ನು ಅಳವಡಿಸಲು ಅಣೆಕಟ್ಟಿನ ಒಂದು ಬೀಮ್ ಅಡ್ಡಿಯಾಗುತ್ತಿದೆ ಎಂದು ಕೆಲವು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
JSW ಉಕ್ಕು ಮತ್ತು ಇತರ ಎರಡು ಎಂಜಿನಿಯರಿಂಗ್ ಕಂಪನಿಗಳು ವಿನ್ಯಾಸಗೊಳಿಸಿದ 4x20 ಚದರ ಅಡಿ ವಿಸ್ತೀರ್ಣದ ಮೂರು ಕಬ್ಬಿಣದ ಪ್ಲೇಟ್ ಗಳನ್ನು ತಂದು ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಅವುಗಳ ಸಣ್ಣ ಗಾತ್ರದ ವ್ಯತ್ಯಾಸದಿಂದ ಹೊಸ ಕ್ರೆಸ್ಟ್ ಗೇಟ್ ಅನ್ನು ಸರಿಪಡಿಸಲು ಕಷ್ಟಕರವಾಗಿದೆ.
ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಮೊನ್ನೆಯವರೆಗೂ 25 ಸಾವಿರ ಕ್ಯೂಸೆಕ್‌ಗಿಂತ ಕಡಿಮೆ ಇದ್ದ ಒಳಹರಿವು ನಿನ್ನೆಯಿಂದ 35ಸಾವಿರ ಕ್ಯೂಸೆಕ್‌ಗೆ ಹೆಚ್ಚಿದೆ.
Advertisement