ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಮುರಿದುಹೋಗಿದ್ದ 19ನೇ ಗೇಟ್ ನಲ್ಲಿ ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದ್ದು ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ. ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ಗೆ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ನಿನ್ನೆ ಮೊದಲ ಸ್ಟಾಪ್ ಲಾಗ್ ಅಳವಡಿಸಲಾಗಿದ್ದು ಇಂದು ಮೂರು ಸ್ಟಾಪ್ ಲಾಗ್ ಅಳವಡಿಸಲಾಗಿದೆ.
ನಾಲ್ಕು ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಬಂದ್ ಆಗಿದೆ. ಸದ್ಯ ಜಲಾಶಲಯದ ಎಲ್ಲ 33 ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ತಡೆಸಿದೆ. ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಇನ್ನು ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಟಿಬಿ ಡ್ಯಾಂನ 19ನೇ ಗೇಟ್ ನಲ್ಲಿ ಸ್ಟಾಪ್ ಲಾಗ್ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಸದ್ಯ ಡ್ಯಾಂನಿಂದ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸುವಲ್ಲಿ ತಂಡ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
70 ವರ್ಷದ ನಂತರ ಡಿಬಿ ಡ್ಯಾಂನಲ್ಲಿ ಇದೇ ಮೊದಲ ಬಾರಿಗೆ ಗೇಟ್ ಒಡೆದಿದ್ದು 30ಕ್ಕೂ ಹೆಚ್ಚು ಟಿಎಂಸಿ ನೀರು ಪೋಲಾಗಿತ್ತು. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿತ್ತು. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಣೆಕಟ್ಟಿಗೆ ಭೇಟಿ ನೀಡಿದ ಬಳಿಕ ಹೇಳಿದ್ದರು.
Advertisement