
ತುಮಕೂರು: ಕೇಂದ್ರ ರೈಲ್ವೆ ಖಾತೆ ಸಹಾಯ ಸಚಿವ ಸೋಮಣ್ಣ (V Somanna) ಅವರು ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ ಕಚೇರಿ ಉದ್ಘಾಟಿಸಿದ್ದು, ಈ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ತುಮಕೂರಿನ ಪರಿವೀಕ್ಷಣಾ ಮಂದಿರದಲ್ಲಿ ತಮಗೆ ನೀಡಲಾಗಿದ್ದ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಏಕಾಏಕಿ ರದ್ದು ಮಾಡಿತ್ತು. ಅದಾಗ್ಯೂ ಇಂದು ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ ಕೇಂದ್ರ ಸಚಿವ ವಿ ಸೋಮಣ್ಣ ಉದ್ಘಾಟಿಸಿದ್ದಾರೆ.
ತುಮಕೂರು ಸಂಸದರಾಗಿರುವ ವಿ. ಸೋಮಣ್ಣ ಅವರು ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೆಯ ಪರಿವೀಕ್ಷಣಾ ಮಂದಿರದ ನಾಲ್ಕು ಕೊಠಡಿಗಳನ್ನು ತಮ್ಮ ಕಚೇರಿ ಉಪಯೋಗಕ್ಕಾಗಿ ಪಡೆದಿದ್ದರು. ಭಾನುವಾರ ನೂತನ ಕಚೇರಿ ಉದ್ಫಾಟನೆ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದರು. ಕಚೇರಿಯನ್ನು ನವೀಕರಣ ಮಾಡಿ ಪೀಠೋಪಕರಣಗಳು, ಕುರ್ಚಿ ಹಾಗೂ ಮೇಜುಗಳನ್ನು ಹಾಕಿಸಿದ್ದರು.
ಅದರೆ ಸಿದ್ಧತೆಗಳನ್ನು ಅವರು ನಡೆಸಿದ ಬಳಿಕ ರಾಜ್ಯ ಸರ್ಕಾರ ಅವರಿಗೆ ನೀಡಲಾಗಿದ್ದ ಪರಿವೀಕ್ಷಣಾ ಮಂದಿರದ ಕಚೇರಿಯನ್ನು ವಾಪಸ್ ಪಡೆದಿತ್ತು. ಇದು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಮೈತ್ರಿ ಪಾರ್ಟಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಏಕಾಏಕಿ ಕಚೇರಿ ತೆರೆಯದಂತೆ ಆದೇಶ ಹಿಂಪಡೆದಿದ್ದ ಸರ್ಕಾರದ ವಿರುದ್ಧ ಸ್ಥಳೀಯ ನಾಯಕರು ಕಿಡಿಕಾರಿದ್ದರು. ಆದರೆ, ಭಾನುವಾರ ಸೋಮಣ್ಣ ಅವರು ಎಂದಿನಂತೆ ಕಚೇರಿಯಲ್ಲಿ ಪೂಜೆ ಮಾಡಿಸಿ ಕಾರ್ಯಾರಂಭ ಮಾಡಿದ್ದಾರೆ.
ವಿ.ಸೋಮಣ್ಣಗೆ ಮಾಜಿ ಸಂಸದ ಜಿಎಸ್ ಬಸವರಾಜ, ಶಾಸಕ ಜಿ. ಬಿ ಜ್ಯೋತಿ ಗಣೇಶ್, ಸುರೇಶ್ ಗೌಡ, ಎಂ.ಟಿ ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಮ್ ಸೇರಿದಂತೆ ಹಲವು ನಾಯಕರು ಜತೆಗಿದ್ದರು. ವಿವಾದದ ನಡುವೆ ನೂತನ ಕಚೇರಿ ಉದ್ಘಾಟನೆ ನಡೆದ ಕಾರಣ ಅಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 300 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ನೀಡಿದ್ದರು.
Advertisement