
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮನೆಯೂಟಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.5ಕ್ಕೆ ಮುಂದೂಡಿದೆ.
ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ಜೈಲು ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿತ್ತು. ಜೈಲು ಅಧಿಕಾರಿಗಳು ತಮ್ಮ ನಿರ್ಣಯವನ್ನು ನೀಡುವಂತೆ ತಿಳಿಸಿತ್ತು.
ಅಂತೆಯೇ ನಿರ್ಧಾರವನ್ನು ಹೈಕೋರ್ಟ್ಗೆ ನೀಡಿದ್ದ ಜೈಲು ಅಧಿಕಾರಿಗಳು ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದರು.
ವೈದ್ಯಾಧಿಕಾರಿಗಳು ದರ್ಶನ್ಗೆ ಮನೆ ಊಟವನ್ನು ನಿರಾಕರಿಸಿದ್ದಾರೆ ಎಂದು ಹೈಕೋರ್ಟ್ನಲ್ಲಿ ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೇಳಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು.
ಈ ವೇಳೆ ದರ್ಶನ್ ಪರ ವಕೀಲೆ ಸಂಜೀವಿನಿ ನಾವದಗಿ ಅವರು ವಾದ ಮಂಡಿಸಿ, ನಮ್ಮ ಕೋರಿಕೆಯನ್ನು ತಿರಸ್ಕರಿಸಿರುವ ಆದೇಶವನ್ನು ಪರಿಶೀಲಿಸಿಲ್ಲ. ಅದನ್ನು ನೋಡಿ ಮೆರಿಟ್ ಮೇಲೆ ವಾದಿಸಲಾಗುವುದು. ನ್ಯಾಯಾಲಯ ಸಮಯ ನಿಗದಿಪಡಿಸಬಹುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿತು.
Advertisement