
ಬೆಂಗಳೂರು: ಕಳೆದ ಸೋಮವಾರ ರಾತ್ರಿ ನಗರದಲ್ಲಿ ತಮ್ಮ ಮಗುವಿನ ಜೊತೆ ತೆರಳುತ್ತಿದ್ದ ದಂಪತಿಯ ಕಾರಿನ ಮೇಲೆ ಕಲ್ಲು ಎತ್ತಿ ಹಾಕುವ ಮೂಲಕ ಯುವಕನೋರ್ವ ಪುಂಡಾಟ ನಡೆಸಿದ್ದಾನೆ.
ಪೊಲೀಸರ ಪ್ರಕಾರ, ಕೋರಮಂಗಲದ ಪಬ್‌ನಲ್ಲಿ ಬೌನ್ಸರ್ ಆಗಿರುವ 26 ವರ್ಷದ ನವೀನ್ ರೆಡ್ಡಿ ಎಂಬಾತ ಬೈಕ್ ನಲ್ಲಿ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ದಾಂದಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ್ದು ಇದನ್ನು ಕಂಡ ಕಾರಿನಲ್ಲಿ ಕುಳಿತ್ತಿದ್ದ ಮಗು ಮತ್ತು ಮಹಿಳೆ ಕಿರುಚಿಕೊಂಡಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ನವೀನ್ ಕಾರಿನ ಗಾಜು ಇಳಿಸುವಂತೆ ಕೂಗಾಡಿದ್ದಾನೆ. ಅದಕ್ಕೆ ಚಾಲಕ ಕಾರಿನಲ್ಲಿ ಮಗುವಿದೆ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ರೆಡ್ಡಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಸವಾರ ಕಾರಿನ ವೈಪರ್ ಗೆ ಹಾನಿ ಮಾಡಿದ್ದು, ವಿಂಡ್ ಶೀಲ್ಡ್ ಒಡೆಯಲು ಯತ್ನಿಸಿದ್ದಾನೆ. ರಸ್ತೆಯಲ್ಲಿ ನಡೆದ ಗಲಾಟೆಯನ್ನು ಕಂಡ ದಾರಿಹೋಕರು ರೆಡ್ಡಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement