ಬೆಂಗಳೂರು: ಗಂಡನಿಂದ ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿಗೆ ಕರ್ನಾಟಕ 'ಹೈಕೋರ್ಟ್' ನ್ಯಾಯಾಧೀಶರು ಚಾಟಿ ಬೀಸಿದ್ದು, ಅಷ್ಟು ಮೊತ್ತವನ್ನು ಸಂಪಾದಿಸಲಿ ಎಂದು ಕಿಡಿಕಾರಿರುವ ಘಟನೆ ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕೋರ್ಟ್ ಕಲಾಪದ ವಿಡಿಯೋ ವೈರಲ್ ಆಗುತ್ತಿದ್ದು, ರಾಧಾ ಮುನುಕುಂಟ್ಲಾ ಎಂಬ ಮಹಿಳೆಯ ಖರ್ಚು ವೆಚ್ಚವನ್ನು ಸಲ್ಲಿಸಿದ ವಿಷಯದ ಕುರಿತು ಆಗಸ್ಟ್ 20 ರಂದು ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು.
ಸೆಪ್ಟೆಂಬರ್ 30, 2023 ರಂದು ಬೆಂಗಳೂರು ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು ಮಹಿಳೆಯ ಪತಿ ಎಂ ನರಸಿಂಹ ಎಂಬುವವರಿಂದ ಮಾಸಿಕ 50,000 ರೂ. ಮಧ್ಯಂತರ ನಿರ್ವಹಣೆ ಮೊತ್ತವನ್ನು ನೀಡುವಂತೆ ಸೂಚಿಸಿ ಆದೇಶ ಹೊರಡಿಸಿತ್ತು. ಈ ಆದೇಶದ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅದರ ವಿಚಾರಣೆ ವೇಳೆ ಮಹಿಳೆ ಪರ ವಕೀಲರು 'ತಮ್ಮ ಕಕ್ಷಿದಾರರಿಗೆ ಮಾಸಿಕ 6 ಲಕ್ಷ ರೂ ಪರಿಹಾರ ಧನ ಬೇಕು' ಎಂದು ವಾದಿಸುತ್ತಾರೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಧೀಶರು ಆಕೆ ಅದನ್ನು ಸಂಪಾದಿಸಿ ತೋರಿಸಲಿ.. ಚೌಕಾಶಿ ಮಾಡಲೆಂದು ಇಷ್ಟು ಮೊತ್ತವನ್ನು ಕೇಳುತ್ತಿದ್ದೀರೇನು? ಎಂದು ಕಿಡಿಕಾರುತ್ತಾರೆ.
ವಕೀಲರ ವಾದವೇನು?
ತಮ್ಮ ಕಕ್ಷಿದಾರರು ಸಾಕಷ್ಟು ಸಂಕಷ್ಟದಲ್ಲಿದ್ದು, ಮೊಣಕಾಲು ನೋವಿನ ಚಿಕಿತ್ಸೆಗೆ 4-5 ಲಕ್ಷ ರೂ, ಶೂ ಮತ್ತು ಡ್ರೆಸ್‌ಗಳಿಗೆ 15,000 ರೂ ಮತ್ತು ಆಹಾರಕ್ಕಾಗಿ 60,000 ರೂ ಸೇರಿದಂತೆ ತಿಂಗಳಿಗೆ 6.16 ಲಕ್ಷ ಜೀವನಾಂಶ ಬೇಕು ಎಂದು ವಾದಿಸುತ್ತಾರೆ. ಆದರೆ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಅವರ ಬೇಡಿಕೆಗಳನ್ನು 'ಶೋಷಣೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ "ಆಕೆ ಇಷ್ಟು ಹಣ ಖರ್ಚು ಮಾಡಲು ಬಯಸಿದರೆ, ಅಷ್ಟು ಮೊತ್ತವನ್ನು ಸಂಪಾದಿಸಲಿ' ಎಂದು ಖಾರವಾಗಿ ಹೇಳಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಜಡ್ಜ್ ಹೇಳಿದ್ದೇನು?
“ಒಬ್ಬ ವ್ಯಕ್ತಿಗೆ ಇಷ್ಟು ದೊಡ್ಡ ಮೊತ್ತದ ಹಣ ಬೇಕು ಎಂದು ನ್ಯಾಯಾಲಯಕ್ಕೆ ದಯವಿಟ್ಟು ಹೇಳಬೇಡಿ. ತಿಂಗಳಿಗೆ 6,16,300 ರೂ... ಒಂಟಿ ಮಹಿಳೆ ತನಗಾಗಿ ಇಷ್ಟು ಹಣ ಖರ್ಚು ಮಾಡುತ್ತಾರೆಯೇ? ಆಕೆ ಅಷ್ಟು ಹಣ ಖರ್ಚು ಮಾಡಲು ಬಯಸಿದರೆ, ಆಕೆ ಸಂಪಾದಿಸಲಿ. ಗಂಡನ ಮೇಲೆ ಹೇರುವುದಲ್ಲ. ನಿಮಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ನೀವು ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ನೀವು ಅದನ್ನು ನಿಮಗಾಗಿ ಬಯಸುತ್ತಿದ್ದೀರಿ ಎಂದು ಕಿಡಿಕಾರಿದರು.
ಚೌಕಾಶಿ ಮಾಡಲು ಇಷ್ಟು ಮೊತ್ತ ಕೇಳುತ್ತಿದ್ದೀರೇನು?.. ನೀವು ಮೊದಲು ಹೆಚ್ಚಿನ ಮೊತ್ತದ ಹಣ ಕೇಳಿದರೆ ಆಗ ನ್ಯಾಯಾಲಯ ಕಡಿಮೆ ಮೊತ್ತಕ್ಕೆ ಇಳಿಸುತ್ತದೆ ಎಂಬುದು ನಿಮ್ಮ ಅಂದಾಜೇನು? ನೀವು ನ್ಯಾಯಯುತ ಪರಿಹಾರ ಕೇಳಬೇಕು” ನ್ಯಾಯಾಧೀಶರು ಹೇಳಿದರು.
ಅಲ್ಲದೆ ನ್ಯಾಯಾಧೀಶರು ಮಹಿಳೆಯ ಪರ ವಕೀಲರಿಗೆ ಸಮಂಜಸವಾದ ಮೊತ್ತವನ್ನು ನೀಡುವಂತೆ ಕೇಳುವಂತೆ ಸೂಚಿಸಿದ್ದು, ಇಲ್ಲದಿದ್ದರೆ ಅವರ ಮನವಿಯನ್ನು ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.
Advertisement