ಉಡುಪಿ: ಮದ್ಯದಲ್ಲಿ ಮಾದಕ ವಸ್ತು ನೀಡಿ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ತಾಫ್ ಬಂಧಿತ ಆರೋಪಿಯಾಗಿದ್ದು, ಹಿಂದೂ ಸಂಘಟನೆಗಳು ಇದು ಅತ್ಯಾಚಾರ ಪ್ರಕರಣವಲ್ಲ. ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿವೆ.
ಸಂತ್ರಸ್ತ ಯುವತಿಗೆ ಅಲ್ತಾಫ್ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದನು. ನಂತರ ಯುವತಿಯನ್ನು ಪುಸಲಾಯಿಸಿ ಆಕೆಯ ಕೆಲಸದ ಸ್ಥಳದಿಂದ ಕಾರಿನಲ್ಲಿ ಕುಕ್ಕುಂದೂರು ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಅಲ್ತಾಫ್ ಸ್ನೇಹಿತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ. ಆರೋಪಿಯು ಅವನ ಸಹಚರ ರಿಚರ್ಡ್ ಕಾರ್ಡೋಜಾ ಗೆ ಹೇಳಿ ಮದ್ಯದ ಬಾಟಲಿಗಳನ್ನು ತರಿಸಿಕೊಂಡಿದ್ದಾನೆ. ಅದರಲ್ಲಿ ಮಾದಕ ದ್ರವ್ಯ ಬೆರೆಸಿ ಯುವತಿಗೆ ಬಲವಂತವಾಗಿ ಕುಡಿಸಿದ್ದಾರೆ, ಬಳಿಕ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಎಸ್ಪಿ ಅರುಣ್ ತಿಳಿಸಿದರು.
ಕೃತ್ಯ ನಡೆಸಿದ ಬಳಿಕ ಆಕೆಯನ್ನು ಮನೆ ಸಮೀಪ ಬಿಟ್ಟು ಹೋಗಿದ್ದಾರೆ. ಆಕೆ ಮತ್ತು ಆಕೆಯ ಕುಟುಂಬದವರು ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಅಲ್ತಾಫ್ ಮತ್ತು ಕಾರ್ಡೋಜಾ ಇಬ್ಬರನ್ನೂ ತಕ್ಷಣದಲ್ಲೇ ಬಂಧಿಸಿದರು ಮತ್ತು ಅಪರಾಧದ ಸಮಯದಲ್ಲಿ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ಕಳ ಠಾಣೆಯ ಸಮೀಪ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಪೋಷಕರ ಹೇಳಿಕೆಯಂತೆ ಅತ್ಯಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಯುವತಿಯ ಹೇಳಿಕೆ ಮತ್ತು ವೈದ್ಯಕೀಯ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಈಗ ಮುಂದಾಗಿದ್ದಾರೆ.
ಸದ್ಯ ಬಾಲಕಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಘಟನೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಖಂಡಿಸಿದ್ದು, ಇದೊಂದು ಲವ್ ಜಿಹಾದ್ ಪ್ರಕರಣವಾಗಿದೆ. ಹಿಂದೂ ಹುಡುಗಿಯರನ್ನು ಗುರಿಯಾಗಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಮತ್ತು ಪೊಲೀಸರು ಆರೋಪಿಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ವರದಿಯಾಗುತ್ತಿವೆ. ಇದೊಂದು ಹೇಯ ಕೃತ್ಯವಾಗಿದ್ದು, ಇದು ಪೂರ್ವಯೋಜಿತ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆರೋಪಿಗಳಿಗೆ ಪೊಲೀಸರ ಕ್ರಮದ ಭಯವಿಲ್ಲ, ಪೊಲೀಸರು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
Advertisement