ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್'ಗೆ ರಾಜಾತಿಥ್ಯ: ಅವ್ಯವಸ್ಥೆಗೆ ಸಿಎಂ ಕೆಂಡಾಮಂಡಲ; ಆರೋಪಿಗಳ ಬೇರೆಡೆ ಶಿಫ್ಟ್‌ ಮಾಡುವಂತೆ ಖಡಕ್ ಸೂಚನೆ

ಪ್ರಸ್ತುತ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಾಗೂ ದರ್ಶನ್ ಮತ್ತು ಅವರ ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ದರ್ಶನ್​ಗೆ​​ ರಾಜಾತಿಥ್ಯ ನೀಡುತ್ತಿರುವ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು. ಜೈಲಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಡಾಮಂಡಲಗೊಂಡಿದ್ದಾರೆ.

ಪ್ರಸ್ತುತ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಾಗೂ ದರ್ಶನ್ ಮತ್ತು ಅವರ ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕಾರಾಗೃಹಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಡಿಜಿಪಿಗೂ ಸೂಚಿಸಿದ್ದಾರೆ.

ಈ ಮಧ್ಯೆ, ನಟ ದರ್ಶನ್‌ಗೆ ಜೈಲಿನೊಳಗೆ ಸಿಗರೇಟ್ ಸೇದಲು ಮತ್ತು ಕಾಫಿ ಕುಡಿಯಲು ಅವಕಾಶ ನೀಡಿದ ಇಬ್ಬರು ಜೈಲರ್‌ಗಳು ಸೇರಿದಂತೆ ಏಳು ಸಿಬ್ಬಂದಿಯನ್ನು ಕಾರಾಗೃಹ ಇಲಾಖೆ ಅಮಾನತುಗೊಳಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಅವರು ಸೋಮವಾರ ಈ ವಿಚಾರವನ್ನು ತಿಳಿಸಿದರು.

ದರ್ಶನ್ ತಮ್ಮ ಬ್ಯಾರಕ್‌ನ ಹೊರಗೆ ಕುರ್ಚಿಯ ಮೇಲೆ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಮತ್ತು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದುಕೊಂಡಿರುವ ಫೋಟೋ ಭಾನುವಾರ ವೈರಲ್ ಆಗಿತ್ತು.

ಫೋಟೋದಲ್ಲಿ, ದರ್ಶನ್ ಅವರ ಮ್ಯಾನೇಜರ್ ಮತ್ತು ಇತರ ಇಬ್ಬರು ಜೈಲು ಕೈದಿಗಳು ಕೂಡ ಅವರೊಂದಿಗೆ ಕುಳಿತಿರುವುದು ಕಂಡು ಬಂದಿತ್ತು.

ಈ ಬೆಳವಣಿಗೆಯು ಹಲವರ ಹುಬ್ಬೇರುವಂತೆ ಮಾಡಿದ್ದು, ಕಾರಾಗೃಹ ಇಲಾಖೆಯಲ್ಲಿನ ಕಾರ್ಯನಿರ್ವಹಣೆ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳು ಹುಟ್ಟುಹಾಕಿವೆ.

ಘಟನೆಯ ಬೆನ್ನಲ್ಲೇ ಕಾರಾಗೃಹಗಳ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯವರೆಗೆ ವಿಚಾರಣೆ ನಡೆಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಫೋಟೋ ವೈರಲ್ ಬೆನ್ನಲ್ಲೇ ಪರಪ್ಪನ ಅಗ್ರಹಾರದ 7 ಅಧಿಕಾರಿಗಳು ಸಸ್ಪೆಂಡ್

ಪ್ರಾಥಮಿಕ ತನಿಖೆಯ ನಂತರ, ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ವರದಿ ಬಂದ ತಕ್ಷಣ ಜೈಲು ಅಧೀಕ್ಷಕರನ್ನು ವರ್ಗಾವಣೆ ಮಾಡಲಾಗುವುದು ಎಂದರು.

ಹಿರಿಯ ಅಧಿಕಾರಿಗಳ ಶಾಮೀಲು ಕಂಡುಬಂದಲ್ಲಿ ಯಾವುದೇ ಹಿಂಜರಿಕೆ ಮತ್ತು ಕರುಣೆ ಇಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜೈಲರ್ ಗಳಾದ ಶರಣ ಬಸವ ಅಮೀನಗಡ, ಪ್ರಭು ಎಸ್.ಖಂಡೇಲವಾಲ್, ಸಹಾಯಕ ಜೈಲರ್ ಎಲ್.ಎಸ್. ತಿಪ್ಪೆ ಸ್ವಾಮಿ ಮತ್ತು ಶ್ರೀಕಾಂತ ತಳವಾರ, ಹೆಡ್ ವಾರ್ಡನ್ ವೆಂಕಟಪ್ಪ ಮೂರ್ತಿ, ವಾರ್ಡನ್ ಬಸಪ್ಪ ತೇಲಿ ಮತ್ತು ಹೆಡ್ ವಾರ್ಡನ್ ವೆಂಕಟಪ್ಪ ಕಟ್ಟೋಳಿ ಮತ್ತು ಸಂಪತ್ ಕುಮಾರ್ ಕಡಪಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ರೀತಿಯ ಬೆಳವಣಿಗೆ ನಡೆಯಬಾರದಿತ್ತು. ವಿಷಯ ಬಹಿರಂಗವಾಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಜೈಲುಗಳಲ್ಲೂ ಜಾಮರ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಿವೆ. ಇದೆಲ್ಲದರ ನಡುವೆಯೂ ಘಟನೆ ನಡೆದಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಕಾರಾಗೃಹದಲ್ಲಿ ಎರಡು ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ದಾಳಿ ನಡೆಸಿತ್ತು. ಆ ವೇಳೆ ಯಾವುದೇ ಮೊಬೈಲ್ ವಶಪಡಿಸಿಕೊಂಡಿರಲಿಲ್ಲ. ಈ ಕುರಿತಂತೆಯೂ ತನಿಖೆ ಮುಂದುವರೆದಿದೆ. ಕಳೆದ 3 ದಿನಗಳ ಜೈಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಇದೇ ವೇಳೆ ದರ್ಶನ್ ಪ್ರಕರಣದಲ್ಲಿ ಸರ್ಕಾರದ ಮೇಲೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

ಸಿಎಂ ಸಿದ್ದರಾಮಯ್ಯ
ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಫೋಟೋ ವೈರಲ್ ಬೆನ್ನಲ್ಲೇ ಪರಪ್ಪನ ಅಗ್ರಹಾರದ 7 ಅಧಿಕಾರಿಗಳು ಸಸ್ಪೆಂಡ್

ಪ್ರಕರಣವನ್ನು ದುರ್ಬಲಗೊಳಿಸುವ ಪ್ರಶ್ನೆಯೇ ಇಲ್ಲ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದ್ದು, ಮುಂದೆಯೂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಅಂತಿಮ ಹಂತದಲ್ಲಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಮುಂದಾಗಿದ್ದರು. ಆದರೆ, ಕಾರಾಗೃಹದಲ್ಲಿ ನಡೆದ ಪ್ರಸ್ತುತ ಘಟನೆ ಅವರಿಗೆ ಹಿನ್ನಡೆಯುಂಟು ಮಾಡಿದಂತಾಗಿದೆ.

ದರ್ಶನ ಮತ್ತು ಅವರ ಗ್ಯಾಂಗ್ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿತ್ತು. ಜೂನ್ 8 ರಂದು ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಅವರ ಭೀಕರ ಹತ್ಯೆ ನಡೆದಿತ್ತು. ಆತನನ್ನು ಆತನ ಹುಟ್ಟೂರಾದ ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಕೊಲೆಯ ನಂತರ ಶವವನ್ನು ಕಾಲುವೆಗೆ ಎಸೆಯಲಾಗಿತ್ತು. ಖಾಸಗಿ ಅಪಾರ್ಟ್‌ಮೆಂಟ್ ಕಟ್ಟಡದ ಭದ್ರತಾ ಸಿಬ್ಬಂದಿ ಶವವನ್ನು ನಾಯಿಗಳ ಹಿಂಡು ಎಳೆದುಕೊಂಡು ಹೋಗುವುದನ್ನು ನೋಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com