ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ ಶೇಷಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ 9 ಜೈಲು ಅಧಿಕಾರಿಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ನಗರದ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್‌ಗೆ ಜೈಲಿನೊಳಗೆ ಸಿಗರೇಟ್ ಸೇದಲು ಮತ್ತು ಕಾಫಿ ಕುಡಿಯಲು ಅವಕಾಶ ನೀಡಿದ ಇಬ್ಬರು ಜೈಲರ್‌ಗಳು ಸೇರಿದಂತೆ 9 ಅಧಿಕಾರಿಗಳನ್ನು ಕಾರಾಗೃಹ ಇಲಾಖೆ ಅಮಾನತುಗೊಳಿಸಿದೆ.
ನಟ ದರ್ಶನ್ ಕೈಯಲ್ಲಿ ಕಾಫಿ ಮಗ್ ಹಿಡಿದು ಸಿಗರೇಟ್ ಸೇದುತ್ತಿರುವ ಫೋಟೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈಲರ್ ಆಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಇಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜೈಲರ್‌ಗಳಾದ ಶರಣ ಬಸಪ್ಪ ಅಮಂಗಡ್ ಮತ್ತು ಪ್ರಭು ಎಸ್ ಖಂಡೇಲ್‌ವಾಲ್, ಸಹಾಯಕ ಜೈಲರ್‌ಗಳಾದ ಎಲ್.ಎಸ್.ಕುಪ್ಪೇಸ್ವಾಮಿ, ಶ್ರೀಕಾಂತ್ ತಳವಾರ, ಹೆಡ್ ವಾರ್ಡರ್‌ಗಳಾದ ವೆಂಕಪ್ಪ, ಸಂಪತ್ ಕುಮಾರ್ ಮತ್ತು ವಾರ್ಡರ್ ಕೆ.ಬಸಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈಗಾಗಲೇ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕಿದ ನಂತರ ಕಾರಾಗೃಹ ಮುಖ್ಯ ಅಧೀಕ್ಷಕ ಶೇಷಮೂರ್ತಿ ಮತ್ತು ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಪ್ರಕರಣದಲ್ಲಿ ಹೆಚ್ಚಿನ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಅವರು ಗೃಹ ಸಚಿವರು ತಿಳಿಸಿದರು.
ನಟನಿಗೆ ಸಿಗರೇಟ್, ಚಹಾ ಮತ್ತು ಕುರ್ಚಿಗಳನ್ನು ಯಾರು ಒದಗಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು. ಜೈಲು ಕೈಪಿಡಿ ಉಲ್ಲಂಘಿಸಿದ್ದರಿಂದ ದರ್ಶನ್ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ ಹೇಳಿದರು.
ಹಿರಿಯ ಐಪಿಎಸ್ ಅಧಿಕಾರಿಗಳು ಪ್ರಕರಣದ ಮುಂದಿನ ತನಿಖೆ ನಡೆಸಲಿದ್ದಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ದರ್ಶನ್ ಸ್ಥಳಾಂತರದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪರಮೇಶ್ವರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂರು ಎಫ್‌ಐಆರ್‌ಗಳು ಜೈಲಿನ ಆವರಣದಲ್ಲಿ ಮೊಬೈಲ್ ಫೋನ್‌ಗಳ ಬಳಕೆ, ಸಿಗರೇಟ್ ಬಳಕೆ ಮತ್ತು ಜೈಲಿನೊಳಗೆ ಈ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದಕ್ಕೆ ಸಂಬಂಧಿಸಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳು) ಮಾಲಿನಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
Advertisement