ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಹಗರಣ ಆರೋಪವೊಂದು ಕೇಳಿ ಬಂದಿದ್ದು, ಈ ಸಂಬಂಧ ಪ್ರಿಯಾಂಕ್ ಖರ್ಗೆಯವರ ವಿರುದ್ಧ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.
ರಾಜ್ಯಪಾಲರಿಗೆ ದೂರು ಸಲ್ಲಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‍ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೈಗಾರಿಕಾ ನಿವೇಶನ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸಿಎ ಸೈಟ್ ಪಡೆಯಲು ಕೆಲವು ಕಾನೂನುಗಳಿವೆ. ಸಾಮಾಜಿಕ ಚಟುವಟಿಕೆ, ರಂಗಮಂದಿರ, ಆಸ್ಪತ್ರೆ- ಹೀಗೆ ನಿಗದಿತ ಉದ್ದೇಶಕ್ಕೆ ನಮೂದಾಗಿರುತ್ತದೆ. ಇದನ್ನು ಇತರ ಅರ್ಜಿಗಳನ್ನು ತಿರಸ್ಕರಿಸಿ ಪ್ರಬಲರಿಗೆ ಕೊಡಲಾಗಿದೆ. ಇದರಿಂದ ಅನುಮಾನ ಶುರುವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ವಿಪಕ್ಷ ನಾಯಕ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ಅವರ ಖಾಸಗಿ, ಒಂದೇ ಮನೆಗೆ ಸೀಮಿತ ಟ್ರಸ್ಟಿಗೆ ನಿವೇಶನ ಕೊಡಲಾಗಿದೆ.
ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಕಲಬುರ್ಗಿಯಲ್ಲಿ ನೋಂದಣಿ ಮಾಡಿದ್ದಾರೆ. ಇದೊಂದು ಧಾರ್ಮಿಕ ಉದ್ದೇಶದ ಟ್ರಸ್ಟ್. ಆದರೆ, ಏರೋಸ್ಪೇಸ್ ಸಂಬಂಧಿಸಿ ನಿವೇಶನ ಪಡೆದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ಕೊಟ್ಟಿದ್ದಾರೆ. ಅದು ಕೂಡ ಏರೋಸ್ಪೇಸ್ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಇತರೆ ಟ್ರಸ್ಟ್‌ಗೂ ಅರ್ಧ ಎಕರೆ ಸಿಕ್ಕಿದ್ದರೂ ಅನುಕೂಲ ಆಗುತ್ತಿತ್ತು. ಇದು ನಂಬಿಕೆಯ ಪ್ರಶ್ನೆ. ಇದು ಮತ್ತೊಂದು ಮುಡಾ ಕೇಸ್ ಆಗಲಿದೆ. ಆ ಜಾಗ ಬೇಕು ಅಂತ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಖರ್ಗೆ ಕುಟುಂಬ ಒಂದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬವಲ್ಲ. ಈ ಬಗ್ಗೆ ಸಂಪೂರ್ಣ ದಾಖಲೆ ಇಟ್ಟು ಮಾತನಾಡುತ್ತೇನೆ. ನಾನು ಹಿಟ್ ಆ್ಯಂಡ್ ರನ್ ಮಾಡುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರೆ ಜಾತ್ಯಾತೀತ ತತ್ವ ಎಲ್ಲಿ ಉಳಿಸಿಕೊಂಡಿದ್ದೀರಿ? ಹಿಂದೆ ಕಾವಿಧಾರಿಗಳನ್ನು ಕಂಡರೇ ಆಗುತ್ತಿರಲಿಲ್ಲ. ಈಗ ಕಾವಿಧಾರಿಗಳನ್ನೂ ಕೂಡ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಕಾವಿಧಾರಿ ಸ್ವಾಮೀಜಿಗಳು ರಾಜಕಾರಣವನ್ನು ತೊಳೆದು ಸ್ವಚ್ಚಮಾಡಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ಮಾಡಿದವರ ರಕ್ಷಣೆಗೆ ಸ್ವಾಮೀಜಿಗಳು ಮುಂದಾಗುವುದು ಎಷ್ಟು ಸರಿ? ದಲಿತ ಸಮುದಾಯಕ್ಕೆ ಅನ್ಯಾಯ ಆದಾಗ ಪ್ರಶ್ನೆ ಮಾಡಬೇಕು.ಯಾರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಅವರ ಪರವಾಗಿ ನಿಲ್ಲುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ದಲಿತರ ಸಂಹಾರ, ದಲಿತರಿಗೆ ಮೋಸ, ದಲಿತರ ಸಮಾಧಿ ಕಟ್ಟುತ್ತಿದೆ. ಮಠಾಧೀಶರು ಈ ಬಗ್ಗೆ ಪ್ರಶ್ನೆ ಮಾಡಬೇಕಿತ್ತು. ಸ್ವಾಮೀಜಿಗಳು ದಲಿತ ವರ್ಗದ ಪರವಾಗಿ ನಿಲ್ಲಿ, ಅನ್ಯಾಯ ಮಾಡಿದವರ ಪರ ನಿಲ್ಲಬೇಡಿ. ದಲಿತ ಸಂಘಟನೆಗಳು ಒಡೆದು ಹೋಗಿವೆ. ಮೋಸ ಮಾಡಿದವರ ಪರವಾಗಿ ಕೆಲವು ದಲಿತ ಸಂಘಟನೆಗಳು ನಿಂತಿವೆ ಎಂದು ಹೇಳಿದರು.
ದಲಿತರಿಗೆ ಮೀಸಲಿಟ್ಟ ಹಣವನ್ನೇ ಲೂಟಿ ಮಾಡಿದವರ ಪರ ಯಾಕೆ ನಿಂತಿದ್ದಾರೆ? ನಿಜವಾಗಿ ಅಂಬೇಡ್ಕರ್ ಬಗ್ಗೆ ವಿಶ್ವಾಸ ಇದ್ದರೆ ದಲಿತರಿಗೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ದಲಿತ ಸಂಘಟನೆಗಳು ಕಾಂಗ್ರೆಸ್ನ ಹುಚ್ಚಾಟಕ್ಕೆ ಬಲಿಯಾಗಿವೆ ಎಂದು ವಾಗ್ದಾಳಿ ಮಾಡಿದರು.
Advertisement