ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನ ಮುಂದಿನ ಒಂದು ತಿಂಗಳ ಒಳಗಾಗಿ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 150 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಕೆ.ಸಿ ಜನರಲ್ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸಲು ಎಂ.ಸಿ.ಎಚ್ ಆಸ್ಪತ್ರೆ, ಭೋದಕ ಕೊಠಡಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿಯ ಅನುದಾನವನ್ನ ಕೇಳಿದ್ದೆವು. ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲೇ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಭೂಮಿ ಪೂಜೆ ಕೂಡಾ ನೆರವೇರಿಸಲಾಗಿದೆ. ಇದರ ಸಂಪೂರ್ಣ ಸದುಪಯೋಗ ನಮ್ಮ ಜನಸಾಮಾನ್ಯರಿಗೆ ದೊರೆಯಲಿದೆ ಎಂದರು. ಆರೋಗ್ಯ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಕ್ರಮವಹಿಸಲಾಗಿದೆ. ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ಇಂದು ದೂರದ ನಗರಪ್ರದೇಶದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಕಿಮೋ ಥೆರಪಿಗೆ ಸಂಬಂಧಿಸಿದಂತೆ ದೊಡ್ಡ ಆಸ್ಪತ್ರೆಗಳಿಗೆ ತೆರಳುವುದನ್ನು ತಪ್ಪಿಸಲು ಮುಂದಿನ ತಿಂಗಳಿಂದ ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಕಿಮೋಥೆರಪಿ ಡೇ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು ಎಂದರು.
ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 65 ನೂತನ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯನ್ನ ಅಪಘಾತಕ್ಕಿಡಾದವರ ನೆರವಿಗಾಗಿಯೇ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಖಾಸಗಿ ವೈದ್ಯರಿಗಿಂತ ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚು ಅನುಭವಿಗಳಾಗಿದ್ದು, ಆರೋಗ್ಯ ಸೇವೆ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಹಿಂದೆ ಬೀಳಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೈಟೆಕ್ ಆರೋಗ್ಯ ಸೇವೆಗಳು ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ರೊಬೊಟಿಕ್ ಸರ್ಜರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
Advertisement