ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ

ಖರ್ಗೆ ಕುಟುಂಬದ ಟ್ರಸ್ಟ್‌ಗೆ ತರಾತುರಿಯಲ್ಲಿ ನಿವೇಶನ ಹಂಚಿಕೆಯಾಗಿದೆ: ಛಲವಾದಿ ನಾರಾಯಣಸ್ವಾಮಿ

ಖರ್ಗೆ ಕುಟುಂಬದ ಟ್ರಸ್ಟ್‌ಗೆ ನೀಡಲಾಗಿರುವ ನಿವೇಶನ ಹಂಚಿಕೆಯಲ್ಲಿ ಹಲವು ಲೋಪಗಳಾಗಿವೆ. ಈ ಅಕ್ರಮದಿಂದ ಸರ್ಕಾರಕ್ಕೆ ಸುಮಾರು ರೂ1,000 ಕೋಟಿ ನಷ್ಟವಾಗಿದೆ.
Published on

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರ ಟ್ರಸ್ಟ್‌ಗೆ ರಾಜ್ಯ ಸರ್ಕಾರವು ತರಾತುರಿಯಲ್ಲಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ ನಿವೇಶನವನ್ನು ಮಂಜೂರು ಮಾಡಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಬುಧವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಸ್ಟ್‌ಗೆ ನೀಡಲಾಗಿರುವ ನಿವೇಶನ ಹಂಚಿಕೆಯಲ್ಲಿ ಹಲವು ಲೋಪಗಳಾಗಿವೆ. ಈ ಅಕ್ರಮದಿಂದ ಸರ್ಕಾರಕ್ಕೆ ಸುಮಾರು ರೂ1,000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದರು.

ಮಾರ್ಚ್ 4 ರಂದು ಅರ್ಜಿಗಳ ಪರಿಶೀಲನೆ ನಡೆದಿದ್ದು, ಮಾರ್ಚ್ 5 ರಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6 ರಿಂದ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಇದೆಲ್ಲವನ್ನೂ ಇಷ್ಟು ಅವಸರದಲ್ಲಿ ಏಕೆ ಮಾಡಲಾಯಿತು. ಇದರ ಹಿಂದಿನ ಕಾರಣವೇನು? ಎಂದು ಪ್ರಶ್ನಿಸಿದರು.

ಅರ್ಜಿ ಸಲ್ಲಿಸಲು ಕೇವಲ 14 ದಿನಗಳ ಕಾಲಾವಕಾಶ ನೀಡಿ ತರಾತುರಿಯಲ್ಲಿ ಪ್ರಕ್ರಿಯೆ ಮುಗಿಸಿರುವುದರಿಂದ ಸಿಎ ನಿವೇಶನಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಿರುವ ಬಗ್ಗೆಯೂ ಹಲವರಿಗೆ ತಿಳಿಯದಂತಾಗಿದೆ. ಇದು KIADB ಇತಿಹಾಸದಲ್ಲಿ ನಡೆದಿರುವ ಅತಿದೊಡ್ಡ ಲೋಪ ಎಂದು ತಿಳಿಸಿದರು.

ಛಲವಾದಿ ನಾರಾಯಣಸ್ವಾಮಿ
ಟ್ರಸ್ಟ್‌ಗೆ KIADB ಜಮೀನು ಪಡೆದ ಆರೋಪ: ಖರ್ಗೆ ಕುಟುಂಬಕ್ಕೆ ಕಾನೂನುಬದ್ಧವಾಗಿ ಭೂಮಿ ಮಂಜೂರು- ಸಿಎಂ ಸಿದ್ದರಾಮಯ್ಯ

ವಿಜಯಪುರದ ಹಲಗನಿಯ ಈಶ್ವರ ಸಂಗಪ್ಪ ಬದ್ರಿ ಅವರ ‘ತ್ರೀಸ್ಟಾರ್‌ ಹೋಟೆಲ್‌’ಗೆ ಸಿ.ಎ ನಿವೇಶನ ಕೊಡಲಾಗಿದೆ. ಇದು ವಾಣಿಜ್ಯ ಉದ್ದೇಶದ್ದಾಗಿದ್ದು, ನಿವೇಶನ ಏಲಂ ಮಾಡಬೇಕಿತ್ತು. ವಾಣಿಜ್ಯ ಉದ್ದೇಶದ ಜಮೀನು 2.5 ಎಕರೆಗೆ ದುಪ್ಪಟ್ಟು ದರ ಕನಿಷ್ಠ ರೂ.12.5 ಕೋಟಿಗೆ ನಿಗದಿ ಮಾಡಬೇಕಿತ್ತು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗುತ್ತಿತ್ತು. ಬಿಡದಿಯಲ್ಲಿ ಸುನಿತಾ ರಾಜಶೇಖರ್ ಎಂಬುವರಿಗೆ ಅಪಾರ್ಟ್‌ಮೆಂಟ್‌ ನಿರ್ಮಿಸಲು ಸಿ.ಎ ನಿವೇಶನ ಮಂಜೂರು ಮಾಡಲಾಗಿದೆ. ಅಪಾರ್ಟ್‌ಮೆಂಟ್‌ ನಿರ್ಮಾಣ ಸಿ.ಎ ಸೌಲಭ್ಯದಡಿ ಬರುವುದೇ ಅಥವಾ ವಾಣಿಜ್ಯ ಉದ್ದೇಶದಡಿ ಬರುತ್ತದೆಯೆ ಎಂಬುದನ್ನು ಸಾರ್ವಜನಿಕರಿಗೆ ಸರ್ಕಾರ ಸ್ಪಷ್ಟಪಡಿಸಬೇಕು.

ಹಾರೋಹಳ್ಳಿಯಲ್ಲಿ ಸ್ಕಿಲ್‌ ಡೆವಲಪ್‌ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಪರಿಶಿಷ್ಟರ ಅರ್ಜಿದಾರರಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿರುವ ಉದಾಹರಣೆಯೂ ಇದೆ. ಕೈಗಾರಿಕಾ ಪ್ರದೇಶದ ಸಿ.ಎ ನಿವೇಶನಗಳಿಗಾಗಿ ಪರಿಶಿಷ್ಟ ಜಾತಿಗೆ ಸೇರಿದ 72 ಮಂದಿ 2– 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಕೆಐಎಡಿಬಿ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದೆ. ಆದರೆ, ಖರ್ಗೆ ಕುಟುಂಬಕ್ಕೆ ನಿಯಮಗಳನ್ನು ಬದಿಗೊತ್ತಿ ಕೆಲವೇ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಿದೆ.

ಉಳಿದ ದಲಿತ ಅರ್ಜಿದಾರರಿಗೆ ಇನ್ನೂ ಜಮೀನು ನೀಡಿಲ್ಲ. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಒಬ್ಬರೇ ಅರ್ಜಿದಾರರಿಗೆ ತಲಾ ಮೂರು ಸಿ.ಎ ನಿವೇಶನಗಳನ್ನು ನೀಡಲಾಗಿದೆ. ಇವರು ಪ್ರಭಾವಿ ಆಗಿರುವುದರಿಂದಲೇ ತಲಾ ಮೂರು ನಿವೇಶನಗಳನ್ನು ವಿತರಿಸಲಾಗಿದೆ. ಖರ್ಗೆ ಅವರ ಟ್ರಸ್ಟ್‌ಗೆ ಮಂಜೂರಾದ ಪ್ರತಿ ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 15-20 ಕೋಟಿ ರೂಪಾಯಿ ಆಗಿದೆ. ಸ್ವಜನಪಕ್ಷಪಾತ ಪ್ರಕರಣವಾಗಿದ್ದು, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ತಮ್ಮ ಮೇಲೆ ವೈಯಕ್ತಿಕ ದಾಳಿ ನಡೆಸದಂತೆಯೂ ಪ್ರಿಯಾಂಕ್ ಖರ್ಗೆಯವರಿಗೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com