ಉತ್ತರ ಕನ್ನಡ: ಕಾಳಿ ನದಿ ದ್ವೀಪದಲ್ಲಿ ಸಿಲುಕಿಕೊಂಡಿದ್ದ ದನಗಾಹಿ ರಕ್ಷಣೆ
ಹುಬ್ಬಳ್ಳಿ: ಸೂಪಾ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದ ನಂತರ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ದ್ವೀಪದಲ್ಲಿ ಸಿಲುಕಿಕೊಂಡಿದ್ದ ದನ ಮೇಯಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ.
ಮಂಗಳವಾರ ತಡರಾತ್ರಿ ಆರಂಭವಾದ ರಕ್ಷಣಾ ಕಾರ್ಯಾಚರಣೆ ಬುಧವಾರದವರೆಗೂ ನಡೆಯಿತು. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ರಕ್ಷಣಾ ತಂಡದ ಪರಿಣಿತ ಈಜುಗಾರರು ಜಾನುವಾರು ಮೇಯಿಸುತ್ತಿದ್ದ ಜನ್ನು ಗಾವಡೆ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸಂಜೆಯಾದರೂ ಮನೆಗೆ ಬಾರದೇ ಇದ್ದುದರಿಂದ ಗಾವಡೆ ಕುಟುಂಬದವರು ಆತಂಕಗೊಂಡಿದ್ದರು. ಅವರು ಅವನನ್ನು ಹುಡುಕಲು ಹೋದಾಗ, ಅವರು ದ್ವೀಪದಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದುದ್ದನ್ನು ಗಮನಿಸಿದರು. ದ್ವೀಪ ಸುತ್ತಲು ನೀರಿನಿಂದ ಆವೃತವಾಗಿತ್ತು.
ಮಂಗಳವಾರ ಸೂಪಾ ಅಣೆಕಟ್ಟಿನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಕೆಳಭಾಗದಲ್ಲಿರುವ ಬೊಮ್ಮನಹಳ್ಳಿ ಡ್ಯಾಂ ಕೂಡ ಗೇಟ್ ತೆರೆಯಲಾಗಿದೆ. ಬೊಮ್ಮನಹಳ್ಳಿ ಜಲಾಶಯ ಮಂಗಳವಾರ ಎರಡು ಬಾರಿಎಚ್ಚರಿಕೆ ಗಂಟೆ ಬಾರಿಸಿತ್ತು. ಆದರೆ ಎಚ್ಚರಿಕೆಯ ಅರಿವಿಲ್ಲದೆ ಗಾವಡೆ ದ್ವೀಪದಲ್ಲಿ ತನ್ನ ದನಗಳನ್ನು ಮೇಯಿಸುವುದನ್ನು ಮುಂದುವರೆಸಿದನು. ಅಣೆಕಟ್ಟು ಅಧಿಕಾರಿಗಳು ನೀರು ಬಿಡುವುದನ್ನು ಕಡಿಮೆ ಮಾಡಿದರೂ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಜಿಲ್ಲಾ ಆಡಳಿತವು ಗಣೇಶಗುಡಿಯಲ್ಲಿರುವ ಮಾನಸ ಅಡ್ವೆಂಚರ್ಸ್‌ನ ಸಹಾಯವನ್ನು ಕೋರಿತು, 10 ಪರಿಣಿತ ರಾಫ್ಟರ್‌ಗಳ ಗುಂಪು ತೆಪ್ಪದಲ್ಲಿ ದ್ವೀಪಕ್ಕೆ ಹೋಗಿ ಬುಧವಾರ ಮುಂಜಾನೆ ಗಾವಡೆ ಅವರನ್ನು ಸುರಕ್ಷಿತವಾಗಿ ಕರೆತಂದರು.