MUDA case: ಸಿಎಂ ಅರ್ಜಿ ವಿಚಾರಣೆ ಆ.31ಕ್ಕೆ, ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್; ಬಳ್ಳಾರಿಗೆ ದರ್ಶನ್ ಸ್ಥಳಾಂತರ; ಅಂಜನಾದ್ರಿ: ಗದೆ, ಧನಸ್ಸು ಹೋಲುವ ದೀಪದ ಕಂಬ ತೆರವಿಗೆ ಆದೇಶ! ಇವು ಇಂದಿನ ಪ್ರಮುಖ ಸುದ್ದಿಗಳು 29-08-2024

File pic
ಈ ದಿನದ ಸುದ್ದಿ ಮುಖ್ಯಾಂಶಗಳು-29-08-2024online desk
1.

ಸಿಎಂ ಅರ್ಜಿ ವಿಚಾರಣೆ ಆ.31 ಕ್ಕೆ ಮುಂದೂಡಿಕೆ, ಡಿಸಿಎಂ ಗೆ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟು ಹಂಚಿಕೆ ಹಗರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈ ಕೋರ್ಟ್ ಆ.31 ಕ್ಕೆ ಮುಂದೂಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾಯಿತು. ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರು ಈ ಪ್ರಕ್ರಿಯೆಯಲ್ಲಿ ವಿವೇಚನೆಯನ್ನು ಬಳಸಿಲ್ಲ ಎಂದು ಸಿಎಂ ಪರ ವಾದ ಮಂಡಿಸಿದರು. ಇನ್ನು ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಆರ್ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದ್ದು, ರಾಜ್ಯ ಸರ್ಕಾರ- ಸಿಬಿಐ ನಡುವಿನ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಬಗೆಹರಿಯುವುದು ಸೂಕ್ತ ಎಂದು ಹೈಕೋರ್ಟ್ ಹೇಳಿದೆ.

2.

ಬಳ್ಳಾರಿಗೆ ದರ್ಶನ್ ಸ್ಥಳಾಂತರ

ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಲಭಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಟ ದರ್ಶನ್ ನ್ನು ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ನಟ ದರ್ಶನ್ ನ್ನು ನೋಡಲು ಸೇರಿದ್ದ ಜನರನ್ನು, ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಇನ್ನು ನಟ ದರ್ಶನ್ ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದ್ದನ್ನು ಬಹಿರಂಗವಾಗಿ ವಿರೋಧಿಸಿ ಕಾರಾಗೃಹದ ಅವ್ಯವಸ್ಥೆಯ ಬಗ್ಗೆ ಹೇಳಿಕೆ ನೀಡಿದ್ದ ದರ್ಶನ್ ಅಭಿಮಾನಿ, ಮಾಜಿ ಕೈದಿಗೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯಲ್ಲಿ ಮಾತನಾಡಿದ್ದ ಮಾಜಿ ಕೈದಿ, ಜೈಲಲ್ಲಿ ರೊಕ್ಕ ಕೊಟ್ಟರೆ ಎಲ್ಲ ಸಿಗ್ತವೆ, ವಾರ್ಡನ್, ಸೂಪರಿಂಟೆಂಡೆಂಟ್, ಜೈಲರ್ ಗಳೇ ಕೈದಿಗಳಿಗೆ ಎಲ್ಲವನ್ನೂ ತಂದುಕೊಡುತ್ತಾರೆ ಎಂದು ಹೇಳಿದ್ದರು. ಮಾಜಿ ಕೈದಿಗೆ ಈಗ ಪೊಲೀಸರು ನೊಟೀಸ್ ಜಾರಿ ಮಾಡಲಾಗಿದೆ.

ಈಮಧ್ಯೆ, ನಟ ದರ್ಶನ್ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಆಪ್ತರಾಗಿದ್ದು, ಇದೇ ಕಾರಣದಿಂದ ದರ್ಶನ್ ನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಪ್ರತಿ ಜಿಲ್ಲೆಗೂ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಯಾರೇ ಇದ್ದರೂ ಪರವಾಗಿಲ್ಲ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ, ಸಚಿವ ಜಮೀರ್ ಗೂ ನಟ ದರ್ಶನ್ ನನ್ನು ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

3.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 80 ಸಾವಿರ ಕೋಟಿ ಕೊರತೆ: ಸಿಎಂ

ರಾಜ್ಯಕ್ಕೆ ಕಳೆದ 5 ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80 ಸಾವಿರ ಕೋಟಿ ಕೊರತೆಯಾಗಿದೆ. ಇದನ್ನು ಸರಿಪಡಿಸಲು 16 ನೇ ಹಣಕಾಸು ಆಯೋಗವನ್ನು ಕೋರಲಾಗಿದ್ದು, ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಹಾಗೂ ಸದಸ್ಯರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು ಉತ್ತಮವಾಗಿ ಅಭಿವೃದ್ಧಿ ಕಾಣುತ್ತಿರುವ ರಾಜ್ಯಗಳತ್ತ ಹಣಕಾಸು ಆಯೋಗ ಸಮಾನ ಆದ್ಯತೆ ನೀಡುವ ಅಗತ್ಯ ಇದೆ. ಪ್ರಗತಿಶೀಲ ರಾಜ್ಯಗಳ ಜನತೆ ತಮ್ಮ ತೆರಿಗೆ ಹಣದಿಂದ ರಾಜ್ಯಕ್ಕೆ ಅನುಕೂಲಕರವಾಗಿರಬೇಕು ಎಂಬ ನಿರೀಕ್ಷೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

4.

ಕೋಮು ಸೌಹಾರ್ದಕ್ಕೆ ಧಕ್ಕೆ ಆರೋಪ: ಅಂಜನಾದ್ರಿಯಲ್ಲಿ ಹನುಮನ ಗದೆ, ರಾಮನ ಧನಸ್ಸು ಹೋಲುವ ದೀಪದ ಕಂಬಗಳ ತೆರವು!

ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ ಎಂಬ ಕಾರಣ ನೀಡಿ ಗಂಗಾವತಿಯ ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹನುಮನ ಗದೆ, ರಾಮನ ಧನಸ್ಸು ಹೋಲುವ ದೀಪದ ಕಂಬಗಳ ತೆರವಿಗೆ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ. SDPI ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ ಎಂದು ತಹಶೀಲ್ದಾರ್ ಗೆ ದೂರು ನೀಡಿತ್ತು. ವಿದ್ಯುತ್ ಕಂಬಗಳನ್ನು ತೆರವಿಗೆ ಸೂಚಿಸಿರುವುದಷ್ಟೇ ಅಲ್ಲದೇ, ದೀಪದ ಕಂಬಗಳನ್ನು ಹಾಕಿರುವ ಕೆಆರ್ ಐಡಿಎಲ್ ವಿರುದ್ಧವೇ ಪ್ರಕರಣ ದಾಖಲಿಸಲು ತಹಸೀಲ್ದಾರ್ ಸೂಚನೆ ನೀಡಿದ್ದಾರೆ.

5.

ಮುಡಾ ಹಗರಣ: ನಕಲಿ ದಾಖಲೆ ಸೃಷ್ಟಿ ಆರೋಪ- ಸಿಎಂ ಪತ್ನಿ, ಕಾಂಗ್ರೆಸ್ ವಕ್ತಾರರ ವಿರುದ್ಧ ದೂರು

ಮುಡಾ ಹಗರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಮೂಲ ದಾಖಲಾತಿ ನಾಶಪಡಿಸಿ, ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿದ್ದರಾಮಯ್ಯ ವಿರುದ್ಧ ಈ ಹಿಂದೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದ ಸ್ನೇಹಮಯಿ ಕೃಷ್ಣ ಅವರು ಈ ಹೊಸ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com