CBI, IT, ರಾಜ್ಯಪಾಲರು ನಿಮ್ಮ ಪರ ಇರಬಹುದು, ನಮ್ಮಲ್ಲಿ ಸಂವಿಧಾನ-ಕಾನೂನಿದೆ: BJP'ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬಿಜೆಪಿಯ ನಾಯಕತ್ವ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ನನ್ನನ್ನು ಗುರಿಯಾಗಿಸುವಂತೆ ಟಾಸ್ಕ್ ನೀಡಲಾಗಿದೆಯೇ?
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ನಿಮ್ಮ ಪರ ಸಿಬಿಐ, ಐಟಿ, ಇಡಿ ಮತ್ತು ರಾಜ್ಯಪಾಲರು ಇರಬಹುದು, ಆದರೆ ನಮ್ಮ ಬಳಿ ಸಂವಿಧಾನ ಹಾಗೂ ಕಾನೂನು ಇದೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆಯವರು ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಅವರ ಆರೋಪವನ್ನು ನಿರಾಕರಿಸಿದ್ದಾರೆ.

ನಾನು ನಿಮ್ಮನ್ನು ಅಥವಾ ನಿಮ್ಮ ರಾಜಸ್ಥಾನಿ ಹಿನ್ನೆಲೆಯನ್ನು ವೈಯಕ್ತಿಕವಾಗಿ ಪ್ರಸ್ತಾಪಿಸಿರುವ ಒಂದೇ ಒಂದು ನಿದರ್ಶನವನ್ನು ತಿಳಿಸುವಿರಾ? ನಿಮ್ಮ ಆರೋಪಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನೀವಿಟ್ಟಿರುವ ಹೆಜ್ಜೆ ತಪ್ಪು. ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ದಯವಿಟ್ಟು ನನ್ನ ಹೇಳಿಕೆಗಳ ಬಗ್ಗೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ. ನೀವು ಪ್ರಬುದ್ಧ ರಾಜಕಾರಣಿ ಎಂದು ನಾನು ಭಾವಿಸಿದ್ದೆ, ಆದರೆ, ಅದು ತಪ್ಪು ಎಂಬುದು ಈಗ ತಿಳಿಯುತ್ತಿದೆ. ನಿಮ್ಮ ಪರವಾಗಿ ಸಿಬಿಐ, ಐಟಿ, ಇಡಿ ಮತ್ತು ರಾಜ್ಯಪಾಲರು ಇರಬಹುದು, ಆದರೆ ನಮ್ಮಲ್ಲಿ ಸಂವಿಧಾನ ಮತ್ತು ಕಾನೂನು ಇದೆ.

ಅಂದಹಾಗೆ, ನೀವು ನೈತಿಕತೆಯನ್ನು ಪ್ರಸ್ತಾಪಿಸಿದ್ದೀರಿ. ನಿಮ್ಮ ನಾಯಕನ ಪೋಕ್ಸೋ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದು ನಿಮ್ಮ ಪಕ್ಷದ ಅಥವಾ ನಿಮ್ಮ ನೈತಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲವೇ ಅಥವಾ ಬಿಜೆಪಿಯ ನಾಯಕತ್ವ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ನನ್ನನ್ನು ಗುರಿಯಾಗಿಸುವಂತೆ ಟಾಸ್ಕ್ ನೀಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಖರ್ಗೆ
ಖರ್ಗೆ ಕುಟುಂಬ ಏರೋಸ್ಪೇಸ್ ಉದ್ಯಮಿಗಳಾಗಿದ್ದು ಯಾವಾಗ?: ಲಹರ್ ಸಿಂಗ್ ಸಿರೋಯ ಪ್ರಶ್ನೆ

ಈ ಹಿಂದೆ ಪೋಸ್ಟ್ ಮಾಡಿದ್ದ ಲಹರ್ ಸಿಂಗ್ ಅವರು, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಟ್ರಸ್ಟ್‌ಗೆ ಕೆಐಎಡಿಬಿ ಭೂ ಮಂಜೂರಾತಿಯನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ಮತ್ತು ಅವರ ಸ್ನೇಹಿತರು ರಾಜಸ್ಥಾನಿ ಎಂದು ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಿದ್ದಾರೆ. ಆದರೆ, ರಾಜಸ್ಥಾನಿಯಾಗಿರುವುದು ಅಪರಾಧವೇ? ರಾಜಸ್ಥಾನವು ಪಾಕಿಸ್ತಾನದಲ್ಲಿಲ್ಲ ಎಂದು ನನ್ನನ್ನು ಟೀಕಿಸುತ್ತಿರುವ ಜನರಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಅಂದಹಾಗೆ, ನೆಹರೂ ಕುಟುಂಬ ಉತ್ತರ ಪ್ರದೇಶದಿಂದ ಬಂದಿದೆಯೇ ಅಥವಾ ಕಾಶ್ಮೀರದಿಂದ ಬಂದಿದೆಯೇ? ಎಂದು ಪ್ರಶ್ನಿಸಿದ್ದರು.

ನಾನು 59 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿದ್ದೇನೆ ಮತ್ತು ಕೆಲಸ ಮಾಡಿದ್ದೇನೆ. ನಾನು ಕನ್ನಡ ಮಾತನಾಡುತ್ತೇನೆ, ಓದುತ್ತೇನೆ ಮತ್ತು ಬರೆಯುತ್ತೇನೆ. ನಾನು ಕರ್ನಾಟಕ ಬಿಜೆಪಿಯ ಖಜಾಂಚಿಯಾಗಿದ್ದೆ. ನಾನು ನನ್ನ ಪಕ್ಷದ ಎಂಎಲ್ಸಿ ಮತ್ತು ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ರಾಹುಲ್ ಗಾಂಧಿ, ಪ್ರಿಯಾಂಕ್ ಖರ್ಗೆ ಅವರ ರೀತಿ ರಾಜಕೀಯ ವಂಶದಿಂದ ಬಂದವನಲ್ಲ. ಆದರೂ ಈ ಮಟ್ಟಿಗೆ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ ಎಂದು ಹೆಮ್ಮೆಪಡುತ್ತೇನೆ.

ಬೇರೆಯವರ ಮೇಲೆ ಕಲ್ಲೆಸೆಯುವ ಮುನ್ನ ಪ್ರಿಯಾಂಕ್ ಖರ್ಗೆ ತಾವು ಗಾಜಿನ ಮನೆಯಲ್ಲಿದ್ದೇನೆ ಎಂಬುದನ್ನು ತಿಳಿದುಕೊಳ್ಳಬೇಕು. ನಾನು ಅವರ ತಂದೆಗಿಂತ ಕೇವಲ 6 ವರ್ಷ ಚಿಕ್ಕವನು. ಆತನಿಗಿಂತ ಹೆಚ್ಚು ಕಾಲದಿಂದ ರಾಜಕೀಯದಲ್ಲಿ ಇದ್ದೇನೆ ಎಂದು ಅವರಿಗೆ ತಿಳಿದಿರಬೇಕು. ಅವರ ಪ್ರತಿಪಾದಿಸಿದ ಶಿಕ್ಷಣಕ್ಕಿಂತ ನನ್ನ ಅನುಭವ ನನಗೆ ಬಹಳ ಪಾಠ ಕಲಿಸಿದೆ.

ಕೆಐಎಡಿಬಿ ಭೂ ಹಂಚಿಕೆ ಪ್ರಕರಣವು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರನ್ನು ತಲುಪಿದೆ. ಅವರು ಅದನ್ನು ಪರಿಶೀಲಿಸುತ್ತಾರೆ. ಖರ್ಗೆ ಕುಟುಂಬದವರಾಗಲಿ ಅಥವಾ ಸಂಬಂಧಪಟ್ಟ ಸಚಿವರಾಗಲಿ ಭೂ ಮಂಜೂರಾತಿಯನ್ನು ನಿರಾಕರಿಸಿಲ್ಲ. ಅದರ ಬದಲಿಗೆ ಸಮರ್ಥಿಸಿಕೊಂಡಿರುವುದು ನನಗೆ ಖುಷಿ ತಂದಿದೆ. ಜನರು ಬುದ್ಧಿವಂತರು, ಇದನ್ನು ಹೇಗೆ ನಿರ್ಣಯಿಸುವುದು ಎಂದು ಅವರಿಗೆ ತಿಳಿದಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com