
ಗಂಗಾವತಿ: ಗಂಗಾವತಿಯ ಜುಲೈ ನಗರದಿಂದ ರಾಣಾ ಪ್ರತಾಪ್ ವೃತ್ತದ ರಸ್ತೆ ಮಧ್ಯದಲ್ಲಿ ಅಳವಡಿಸಲಾಗಿದ್ದ ಧಾರ್ಮಿಕ ಚಿಹ್ನೆಯುಳ್ಳ (ತಿರುಪತಿ ಮಾದರಿಯ) ವಿದ್ಯುತ್ ದೀಪಗಳ ಕಂಬ ತೆರವಿಗೆ ನೀಡಿದ್ದ ಆದೇಶಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ರದ್ದುಪಡಿಸಲಾಗಿದೆ.
ಗಂಗಾವತಿ ನಗರ ಪಾಲಿಕೆ ವ್ಯಾಪ್ತಿಯ ಜಾಗದಲ್ಲಿ ಕಂಬಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಕಂಬಗಳ ಕುರಿತು ನಗರಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.
ಈ ವಿದ್ಯುತ್ ಕಂಬಗಳ ಮೇಲೆ ತಿರುಪತಿ, ಆಂಜನೇಯ, ಶ್ರೀರಾಮನ ಚಿತ್ರ ಅಳವಡಿಸಲಾಗಿದ್ದು, ಇವುಗಳನ್ನು ತೆರವುಗೊಳಿಸುವಂತ ಎಸ್'ಡಿಪಿಐ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಮೌಖಿಕ ಆದೇಶದ ಮೇರೆಗೆ ತಹಸೀಲ್ದಾರರು ಕಂಬ ತೆರವುಗೊಳಿಸಿ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಬಳಿಕ ವಿದ್ಯುತ್ ಕಂಬಗಳ ತೆರವಿಗೆ ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ತಹಶೀಲ್ದಾರ್ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ಬಿಜೆಪಿಯ ಹಿರಿಯ ನಾಯಕ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಗಧೆ ಮತ್ತು ಬಿಲ್ಲು-ಬಾಣದ ಚಿಹ್ನೆಗಳನ್ನು ಹೊಂದಿರುವ ದೀಪಸ್ತಂಭಗಳನ್ನು ಸ್ಥಾಪಿಸಲಾಗಿದೆ, ಇದು ಆ ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ. ಆದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಎಸ್‌ಡಿಪಿಐ ಆರೋಪಿಸಿದ ನಂತರ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಈ ಕಂಬಗಳ ತೆರವಿಗೆ ಆದೇಶಿಸಿದೆ ಎಂದು ಕಿಡಿಕಾರಿದ್ದಾರೆ.
ಸಿಟಿ ರವಿಯವರು ಪೋಸ್ಟ್ ಮಾಡಿ, ನಮ್ಮೆಲ್ಲರ ಆರಾಧ್ಯ ದೈವ ಹನುಮನ ಜನ್ಮಸ್ಥಳದಲ್ಲಿ ತ್ರಿಶೂಲ-ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆಯಂತೆ. ಸಿಎಂ ಸಿದ್ದರಾಮಯ್ಯ ಅವರೆ, ಇದು ಯಾವ ಸೀಮೆಯ ಲಾಜಿಕ್. ಪ್ರತಿನಿತ್ಯ ಮೈಕುಗಳಲ್ಲಿ ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ..?? ಹಿಂದೂ ವಿರೋಧಿ ನಿರ್ಣಯ ಅಂಗೀಕರಿಸಿರುವ ಗಂಗಾವತಿಯ ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತು ಮಾಡಿ. ಇಷ್ಟರ ಮೇಲೆಯೂ ತಹಶೀಲ್ದಾರ್ ಆದೇಶದಂತೆ ಗಂಗಾವತಿಯಲ್ಲಿ ವಿದ್ಯುತ್ ದೀಪಗಳನ್ನು ತೆರವುಗೊಳಿಸಲು ಮುಂದಾದರೇ, ಗಂಗಾವತಿಗೆ ನಾವೇ ಬಂದು ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗುತ್ತದೆ, ಎಚ್ಚರ ಎಂದು ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್ ಮಾಡಿ, ಈ ರೀತಿಯಾದ ಕಾನೂನು ಹಿಂದೂಗಳಿಗಷ್ಟೇ ಅನ್ಯವಾಗುತ್ತದೆಯಾ ಎಂಬುದು ಪ್ರಶ್ನೆ. ಮಸೀದಿಗಳಲ್ಲಿ ಹಾಕುವ ಅಜಾನ್ ಬಗ್ಗೆ ಈ ರೀತಿಯಾದ ಕ್ಷಿಪ್ರ ಕಾರ್ಯಾಚರಣೆ ಆಗಿದ್ದನ್ನು ನೀವು ನೋಡಿದ್ದೀರಾ. ಹಿಂದೂಗಳಿಗೆ ಒಂದು ಕಾನೂನು, ಅನ್ಯ ಕೋಮಿನವರಿಗೆ ಮತ್ತೊಂದು. ಗಂಗಾವತಿ ತಹಸೀಲ್ದಾರರು ತಮ್ಮ ಕಚೇರಿಯಲ್ಲಿರುವ ಬಾಕಿ ಕಡತ, ರೈತರಿಗೆ ಅನುಕೂಲ ಆಗುವ ಕೆಲಸ ಮಾಡುವುದನ್ನು ಬಿಟ್ಟು, ಧಾರ್ಮಿಕ ಸೌಹಾರ್ದತೆ ಹಾಗೂ ಭಾವನೆಗಳಿಗೆ ಅಡ್ಡಿ ಬರುವ ಒಂದು ಪತ್ರವನ್ನು ಓದಿಕೊಂಡು, ತಕ್ಷಣ ಕಾನೂನು ಕ್ರಮ ಜರುಗಿಸುವಷ್ಟು ಸಮಯ ಇರುವುದು ನಿಜಕ್ಕೂ ಆಶ್ಚರ್ಯಕರ ಎಂದು ವ್ಯಂಗ್ಯವಾಡಿದ್ದಾರೆ.
Advertisement