
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಶುಕ್ರವಾರ ಹೇಳಿದ್ದಾರೆ.
ಕೆಲವು ಕೈದಿಗಳು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವು ಕೈದಿಗಳಿಗೆ, ಉದಾಹರಣೆಗೆ ನಟ ದರ್ಶನ್ ತೂಗುದೀಪ ಅವರಿಗೆ ರಾಜಾತಿಥ್ಯ ನೀಡಿದ ಬಗ್ಗೆೆಯೂ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರು ರೌಡಿಶೀಟರ್ ಸೇರಿದಂತೆ ಮೂವರೊಂದಿಗೆ ಜೈಲಿನ ಹುಲ್ಲುಹಾಸಿನ ಮೇಲೆ, ರಿಲ್ಯಾಕ್ಸ್ ಮೂಡ್‌ನಲ್ಲಿ, ಕುರ್ಚಿಯ ಮೇಲೆ ಕುಳಿತು ಸಿಗರೇಟ್ ಮತ್ತು ಕಾಫಿ ಕುಡಿಯುತ್ತಿರುವ ಫೋಟೋ ಭಾರಿ ವೈರಲ್ ಆಗಿತ್ತು. ಅಲ್ಲದೆ, ದರ್ಶನ್ ಜೈಲಿನಿಂದ ವಿಡಿಯೋ ಕಾಲ್ ಮೂಲಕ ವ್ಯಕ್ತಿಯೊಬ್ಬನೊಂದಿಗೆ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ, ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ವಿವಿಧ ಅಕ್ರಮಗಳ ಕುರಿತು ಮೂರು ಪ್ರಕರಣಗಳು ದಾಖಲಾಗಿದ್ದು, ಅಲ್ಲಿನ ಕೈದಿಗಳ ವಿರುದ್ಧ ಎರಡು ಪ್ರಕರಣಗಳು ಮತ್ತು ಮೂರನೇ ಪ್ರಕರಣ ಜೈಲು ಅಧಿಕಾರಿಗಳ ವಿರುದ್ಧ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಈ ಮೂರೂ ಪ್ರಕರಣಗಳ ಕುರಿತು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದರೆ. ಇತರ ಎರಡು ಪ್ರಕರಣಗಳ ಕುರಿತು ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಾರಾಗೃಹದೊಳಗೆ ತನಿಖೆ ನಡೆಸಲು ನ್ಯಾಯಾಲಯದ ಅನುಮತಿ ಪಡೆಯಲಾಗಿದ್ದು, ಕಳೆದ ಎರಡು ದಿನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.
"ಜೈಲಿನಿಂದ ಇನ್ನೂ ಒಂದು ಫೋಟೋ ಹೊರಹೊಮ್ಮಿದೆ. ಅದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್(ಡಿಸಿಪಿ) ಸಾರಾ ಫಾತಿಮಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಅವರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಈಗಾಗಲೇ ಅನೇಕ ಕೈದಿಗಳು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ... ಜೈಲಿನಲ್ಲಿ ನಡೆದಿರುವ ಯಾವುದೇ ಅಕ್ರಮಗಳ ಬಗ್ಗೆ ಯಾರಾದರೂ ನಿರ್ದಿಷ್ಟ ಮಾಹಿತಿ ನೀಡಿದರೆ. ನಾವು ನಿರ್ದಾಕ್ಷಿಣ್ಯ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.
ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ನಂತರ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಸೇರಿದಂತೆ 9 ಮಂದಿ ಕಾರಾಗೃಹದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
Advertisement