ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ಬದಲಿ ನಿವೇಶನಗಳನ್ನು ನೀಡುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಡಳಿತ ಮಂಡಳಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಎಂಎಲ್ಸಿ ರವಿಕುಮಾರ್, 2020ರಲ್ಲಿ ಮುಡಾ ಸಭೆಯಲ್ಲಿನ ನಡಾವಳಿ ಮತ್ತು ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಿದರು. 2020ರ ಮುಡಾ ಸಭೆಯಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡುವ ಬಗ್ಗೆ ನಿರ್ಣಯ ಆಗಿದೆ ಎನ್ನುತ್ತಿದ್ದಾರೆ. ಆದರೆ, ಅಂದಿನ ಸಭೆಯಲ್ಲಿ ಆ ಬಗ್ಗೆ ಚರ್ಚೆಯೇ ಆಗಿಲ್ಲ" ಎಂದು ಆರೋಪಿಸಿ, 2020ರಲ್ಲಿ ಮುಡಾ ಸಭೆಯಲ್ಲಿನ ನಡಾವಳಿಗಳು ಮತ್ತು ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.
ಆಡಳಿತ ಮಂಡಳಿ ಸಭೆ ನಿವೇಶನ ಹಂಚಿಕೆಯ ನಿರ್ಣಯ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ, ಅದು ಸುಳ್ಳು ಮಾಹಿತಿ ಎಂದು ಆರೋಪಿಸಿದ್ದಾರೆ. ಮುಡಾ 2020 ನವೆಂಬರ್ 20ರಂದು ನಡೆಸಿದ ಸಭೆಯಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಮತ್ತು ಇತರ ಸಚಿವರು ಹೇಳುತ್ತಲೇ ಬಂದಿದ್ದಾರೆ. ನಮಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಸಭೆಯ ನಡಾವಳಿಯಲ್ಲಿ ಆ ವಿಷಯವೇ ಪ್ರಸ್ತಾಪ ಆಗಿರಲಿಲ್ಲ ಮತ್ತು ನಿರ್ಣಯವನ್ನೂ ತೆಗೆದುಕೊಂಡಿರಲಿಲ್ಲ’ ಎಂದರು.
ಅಂದಿನ ಸಭೆಯಲ್ಲಿ ಮುಡಾ ಅಧ್ಯಕ್ಷ ರಾಜೀವ್, ಎಂಎಲ್ಸಿಗಳಾದ ಯತೀಂದ್ರ ಮತ್ತು ಮರಿತಿಬ್ಬೇಗೌಡ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್ ಮತ್ತು ಮುಡಾ ಆಯುಕ್ತ ನಟೇಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಯಾವುದೇ ಅನುಮೋದನೆ ನೀಡಲಿಲ್ಲ, ಆದರೆ ಮುಡಾ ಆಯುಕ್ತರು ಮತ್ತು ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು ಮತ್ತು ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯದ ಆಧಾರದ ಮೇಲೆ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕಿತ್ತು ಎಂದಿದ್ದಾರೆ.
14 ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಕುರಿತು ಪ್ರಸ್ತಾಪಿಸಿದಾಗ ಸಿದ್ದರಾಮಯ್ಯ ಅವರು ಮುಡಾ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಬದಲಾಗಿ ಅವರ ಕುಟುಂಬಕ್ಕೆ 62 ಕೋಟಿ ರೂ. ಪರಿಹಾರ ನೀಡಬೇಕೆಂದು ಹೇಳಿದ್ದರು, ಆದರೆ ಮುಡಾ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ 87,000ಕ್ಕೂ ಹೆಚ್ಚು ಮಂದಿಗೆ ನಿವೇಶನ ಸಿಕ್ಕಿಲ್ಲ. ಸಿಎಂ ಈ ನಿವೇಶನಗಳನ್ನು ಮುಡಾಕ್ಕೆ ಮರಳಿ ಹಸ್ತಾಂತರಿಸುವರೇ? ಸದನದಲ್ಲೂ ಇದಕ್ಕೆ ಉತ್ತರ ನೀಡಲಿಲ್ಲ,’’ ಎಂದು ದೂರಿದರು.
ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವ ಹಲವು ನಿದರ್ಶನಗಳು ಬಸವರಾಜ ಬೊಮ್ಮಾಯಿ ಸರಕಾರ ಅಧಿಕಾರದಲ್ಲಿದ್ದಾಗ ಕಂಡುಬಂತು, ಹೀಗಾಗಿ ಬೊಮ್ಮಾಯಿ ವರದಿಯನ್ನು ಸಲ್ಲಿಸಿದ ತಾಂತ್ರಿಕ ತಜ್ಞರ ಸಮಿತಿಯಿಂದ ತನಿಖೆಗೆ ಆದೇಶಿಸಿದ್ದರು. ಮುಡಾ ನಿವೇಶನಗಳ ಅಕ್ರಮ ಹಂಚಿಕೆ ವಿಚಾರವನ್ನು ಸಮಿತಿ ಪ್ರಸ್ತಾಪಿಸಿತ್ತು. ಮುಖ್ಯಮಂತ್ರಿಯವರು ಈ ವರದಿಯನ್ನು ಬಿಡುಗಡೆ ಮಾಡಬಹುದೇ ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.
Advertisement