ತಮಿಳುನಾಡಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಕರ್ನಾಟಕದ ಹಲವೆಡೆ ಮಳೆ ಆರ್ಭಟ ಜೋರಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಅಬ್ಬರ ರಾಜ್ಯದ ಮೇಲೂ ಪ್ರಭಾವ ಬೀರುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳನ್ನು ಕಾಡುವ ಸಾಧ್ಯತೆ ಇದೆ. ಇನ್ನು ಹವಾಮಾನ ಇಲಾಖೆ ಮೈಸೂರು ಹಾಗೂ ಕೊಡಗು ಜಿಲ್ಲೆಗಳಿಗೆ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿದ್ದರೆ ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಹಲವೆಡೆ ಮಳೆಯಾಗುತ್ತಿದೆ.
ರಾಜ್ಯದಲ್ಲಿ ನವೀಕರಿಸಬಲ್ಲ ಇಂಧನ, ಗ್ರೀನ್ ಹೈಡ್ರೋಜೆನ್, ಹಾಗೂ ಇತರೆ ಪೂರಕ ಯೋಜನೆಗಳು ಒಳಗೊಂಡಂತೆ 11,000 ಕೋಟಿ ರೂಪಾಯಿ ಮೊತ್ತದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂಬಂಧ ಹೀರೊ ಫ್ಯೂಚರ್ ಎನರ್ಜೀಸ್ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ವೆಸ್ಟ್ ಕರ್ನಾಟಕ 2025 ರೋಡ್ ಮ್ಯಾಪ್ ನ ಭಾಗವಾಗಿರುವ ಈ ಪ್ರಮುಖ ಹೂಡಿಕೆಯು ರಾಜ್ಯದಲ್ಲಿ 3,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಈ ಒಪ್ಪಂದದಿಂದ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಜೊತೆಗೆ ಡೀಕಾರ್ಬನೈಸೇಷನ್ ಉತ್ತೇಜಿಸಿ, ಕರ್ನಾಟಕವನ್ನು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ನಂ. 1 ಸ್ಥಾನದಲ್ಲಿ ನಿಲ್ಲಿಸಲಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.
ಆಂಧ್ರ ಗಡಿಭಾಗದ ವಿಡಪನಕಲ್ ಬಳಿ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಬಳ್ಳಾರಿ ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ಓರ್ವ ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತರನ್ನು ಡಾ.ಗೋವಿಂದರಾಜುಲು, ಡಾ.ಯೋಗೇಶ್ ಮತ್ತು ವಕೀಲ ವೆಂಕಟನಾಯ್ಡು ಎಂದು ಗುರುತಿಸಲಾಗಿದೆ. ಮತ್ತೋರ್ವ ಖಾಸಗಿ ಆಸ್ಪತ್ರೆ ವೈದ್ಯ ಅಮರೇಗೌಡ ಪಾಟೀಲ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಅನಂತಪುರ ಮಾರ್ಗವಾಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯ ಔಷಧ ನಿಯಂತ್ರಕನನ್ನು ಅಮಾನತು ಮಾಡಿದೆ. ಈ ಘಟನೆಯ ಕುರಿತಂತೆ ಉನ್ನತಮಟ್ಟದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಲ್ಲಿ ರಾಜ್ಯ ಔಷಧ ನಿಯಂತ್ರಕ ಉಮೇಶ್ ಎಂಬುವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಬಾಣಂತಿಯರಿಗೆ ನೀಡಲಾಗಿರುವ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿರುವ ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ, ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿಎಂ ಆದೇಶಿಸಿದ್ದಾರೆ.
ಕನ್ನಡದ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡೊಂದ್ಲಾ ಮೂರು, ಎಟಿಎಮ್, ಜಾಕ್ ಪಾಟ್ ಚಿತ್ರಗಳಲ್ಲಿ ನಟಿಸಿದ್ದು ಶೋಭಿತಾ ಬ್ರಹ್ಮಗಂಟು ಹಾಗೂ ನಿನ್ನಿಂದಲೇ ಧಾರಾವಾಹಿಗಳ ಮೂಲಕ ಜನಮನ್ನಣೆ ಗಳಿಸಿದ್ದರು. ಹಾಸನದ ಸಕಲೇಶಪುರ ಮೂಲದ ಶೋಭಿತಾ ಶಿವಣ್ಣ ಎರಡುವರ್ಷಗಳ ಹಿಂದೆ ಹೈದರಾಬಾದ್ ಮೂಲದ ಯುವಕನನ್ನು ಅದ್ಧೂರಿಯಾಗಿ ಮದುವೆಯಾಗಿ ಹೈದರಾಬಾದ್‌ನಲ್ಲೇ ಸೆಟಲ್ ಆಗಿದ್ದು ಚಿತ್ರರಂಗದಿಂದ ದೂರ ಉಳಿದಿದ್ದರು. ನಟಿ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ನಿನ್ನೆ ರಾತ್ರಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್‌ನಲ್ಲಿ ಮರಣೋತ್ತರ ಪರೀಕ್ಷೆ ನಂತರ ಅವರ ಮೃತದೇಹ ಬೆಂಗಳೂರಿಗೆ ತರೋ ಸಾಧ್ಯತೆ ಇದೆ.
Advertisement