
ತುಮಕೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ದಿಗೂ ಒತ್ತು ನೀಡುತ್ತಿದ್ದು, ಪ್ರತಿಪಕ್ಷಗಳ ಸುಳ್ಳುಗಳಿಗೆ ಜನರು ಕಿವಿಗೊಡಬಾರದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.
ತುಮಕೂರಿನಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಪ್ರತಿಪಕ್ಷಗಳ ಹೇಳಿಕೆ ವಿರುದ್ಧ ಕಿಡಿಕಾರಿದರು.
ಕೆಲವರು ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅನವಶ್ಯಕ ಚರ್ಚೆ ಮಾಡುತ್ತಿದ್ದಾರೆ. ಸುಮಾರು 250 ಕೋಟಿಯಷ್ಟು ಹಣ ಗ್ಯಾರಂಟಿ ಯೋಜನೆಗಳ ಮೂಲಕ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ತಲುಪುತ್ತಿದೆ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣವಾಗುತ್ತಿದೆ. ಇದು ಅಭಿವೃದ್ದಿಯಲ್ಲವೇ? ಎಂದು ಪ್ರಶ್ನಿಸಿದರು.
ತುಮಕೂರು ಜಿಲ್ಲೆಯ ಲಂಬಾಣಿ ಜನಾಂಗಗಳಿಗೆ 94ಡಿ ಅಡಿಯಲ್ಲಿ ಅವರು ವಾಸವಿರುವ ಜಮೀನುಗಳನ್ನು ಸಕ್ರಮ ಮಾಡಿ, ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನು ಕೈಗೂಡಿಸಿದೆ. ಈಗಾಗಲೇ ಎತ್ತಿನಹೊಳೆ ಯೋಜನೆಗೆ ನಮ್ಮ ಸರ್ಕಾರ ಉದ್ಘಾಟಿಸಿದೆ. ಮಧ್ಯದಲ್ಲಿ ಒಂದಷ್ಟು ಅಡೆತಡೆಗಳಿದ್ದುತ ಅದನ್ನು ಆದಷ್ಟು ಬೇಗ ನಿವಾರಿಸಿ ತುಮಕೂರು ಜಿಲ್ಲೆಗೆ ನೀರು ಕೊಡುತ್ತೇವೆಂದು ಹೇಳಿದರು.
ಜನರ ಬದುಕಿಗಾಗಿ ಐದು ಗ್ಯಾರಂಟಿ ಯೋಜನೆಗಳ ಮೂಲಕ 56 ಸಾವಿರ ಕೋಟಿ ಹಣವನ್ನು ವಿನಿಯೋಗ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಶಕ್ತಿ ಇಡೀ ದೇಶಕ್ಕೆ ಪರಿಚಿತವಾಗಿದೆ. ದೇಶದ ಒಂದಷ್ಟು ರಾಜ್ಯಗಳಲ್ಲಿ ಇರುವ ಬಿಜೆಪಿ ರಾಜ್ಯ ಸರ್ಕಾರಗಳು ನಮ್ಮ ಯೋಜನೆಗಳನ್ನು ನಕಲು ಮಾಡಿ ಜಾರಿಗೆ ತರುತ್ತಿರುವುದು ಸಂತೋಷದ ಸಮಾಚಾರ ಎಂದು ತಿಳಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳು ಎಲ್ಲಾ ಜಾತಿ ಮತ್ತು ಧರ್ಮದವರಿಗಾಗಿ ಆಗಿದೆ. ನಾವು ಪ್ರತಿಯೊಬ್ಬರ ಅಭಿವೃದ್ಧಿಗೆ ಯೋಜಿಸಿರುವುದರಿಂದ ರಾಜ್ಯದ ಆರ್ಥಿಕತೆಯು ಉತ್ತೇಜನವನ್ನು ಪಡೆದುಕೊಂಡಿದೆ, ರಾಷ್ಟ್ರೀಯ ಸರಾಸರಿ ಶೇ.8.2 ಕ್ಕೆ ಹೋಲಿಸಿದರೆ ಕರ್ನಾಟಕವು ಶೇ.10.2 ಜಿಎಸ್‌ಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. ಎಫ್‌ಡಿಐ ಆಕರ್ಷಿಸುವಲ್ಲಿ ಮತ್ತು ತೆರಿಗೆ ಪಾವತಿಸುವಲ್ಲಿ ಕರ್ನಾಟಕವು ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ಎಲ್ಲಾ ಜಾತಿ ಮತ್ತು ಧರ್ಮದವರ ಸಾಮೂಹಿಕ ಕೊಡುಗೆಯಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ ಎಂದರು.
ರಾಜ್ಯದಲ್ಲಿ 136, ತುಮಕೂರು ಜಿಲ್ಲೆಯಿಂದ 7 ಶಾಸಕರನ್ನು ಕೊಟ್ಟು ನಮ್ಮ ಕೈ ಬಲ ಪಡಿಸಿದ್ದೀರಿ. ಈಗ ಮತ್ತೆ ಎರಡು ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಿಸಿ 138 ಕ್ಕೆ ನಮ್ಮ ಬಲ ಏರಿಸಿ ನಮ್ಮ ಆತ್ಮಬಲವನ್ನು ಹೆಚ್ಚಿಸಿದ್ದೀರಿ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಜನ ಅವಕಾಶ ಕೊಟ್ಟಿದ್ದಾರೆ. ನಾವು ಜನರನ್ನು, ಸಂವಿಧಾನವನ್ನು ನಂಬಿ ಕೆಲಸ ಮಾಡುತ್ತಿದ್ದೇವೆ. ಇದೇ 5ನೇ ತಾರೀಕಿನಂದು ಹಾಸನದಲ್ಲಿ ವಿವಿಧ ಸಂಘಟನೆಗಳ ಜೊತೆ ಸೇರಿ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಹೇಳುತ್ತಾರೆ ʼಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ್ದಾನೆ ಎನ್ನುವುದು ಮುಖ್ಯ. ಈ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕೋಟ್ಯಂತರ ಜನರ ಬದುಕನ್ನು ಬದಲಾವಣೆ ಮಾಡಿದೆ, ಮಾಡುತ್ತಿದೆ. ನಮಗೆ ಜಾತಿ, ಧರ್ಮ ಮುಖ್ಯವಲ್ಲ. ಜನರ ಕಲ್ಯಾಣ ಮುಖ್ಯ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
Advertisement