
ಶಿಗ್ಗಾಂವಿ: ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ವೇದಿಕೆ ಮೇಲೆ ತಮ್ಮನ್ನು ಆಹ್ವಾನಿಸಿಲ್ಲ. ಯಾರೂ ನನ್ನನ್ನು ಸ್ವಾಗತಿಸಲಿಲ್ಲ ಎಂದು ಸಿಟ್ಟಾದ ನೂತನ ಶಾಸಕ ಯಾಸೀರ್ ಖಾನ್ ಪಠಾಣ್ ಹಾಗೂ ಅವರ ಬೆಂಬಲಿಗರು ವಿವಿ ಸಿಬ್ಬಂದಿಗಳ ಮೇಲೆ ಹರಿಹಾಯ್ದ ಘಟನೆ ಸೋಮವಾರ ನಡೆಯಿತು.
ಶಿಗ್ಗಾಂವಿ ಸಮೀಪದ ಗೊಟಗೋಡಿಯಲ್ಲಿ ಜಾನಪದ ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಘಟಿಕೋತ್ಸವಕ್ಕೆ ಗಣ್ಯರನ್ನು ಆಹ್ವಾನಿಸಲಾಗಿತ್ತು. ಘಟಿಕೋತ್ಸವಕ್ಕೂ ಮುನ್ನ ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಜಾನಪದ ಶೈಲಿಯಲ್ಲಿ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ. ಎಂ.ಸಿ.ಸುಧಾಕರ್ ಪಾಲ್ಗೊಂಡಿದ್ದರು.
ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ್ ಆಗಮಿಸಿದರು. ಮುಂದೆ ಹೋಗಿ ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಬಳಿ ಆಗಮಿಸಿ, ನನ್ನನ್ನು ವೇದಿಕೆಗೆ ಕರೆದಿಲ್ಲಾ, ನಾನು ವಿವಿಗೆ ಬಂದರೂ ಯಾರೂ ಸ್ವಾಗತಿಸಲಿಲ್ಲ ಎಂದು ಗರಂ ಆದರು.
ನಾನು ಸದ್ಯದಲ್ಲೇ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ. ಆ ಮೇಲೆ ನಾವು ವಾಪತ್ ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಿಮಗೆ ಮುಂದೆ ಐತಿ. ವಿವಿಯವರು ಇಲ್ಲಿ ಬಾಳ್ವೆ ಮಾಡಿ ನೋಡ್ತೀನಿ, ಕುಲಪತಿಗೆ ಕಾದಿದೆ ಮಾರಿಹಬ್ಬ ಎಂದು ಅವಾಜ್ ಹಾಕಿದರು. ಅಲ್ಲದೆ, ನಮ್ಮ ಶಾಸಕರ ಹಸೆರನ್ನು ಕಾರ್ಡ್ ನಲ್ಲಿ ಹಾಕಿಲ್ಲ ಎಂದು ವಿವಿ ಪ್ರಾಧ್ಯಾಪಕರ ವಿರುದ್ಧ ಬೆಂಬಲಿಗರು ಧಿಕ್ಕಾರ ಕೂಗಿದರು. ಇದೇ ವೇಳೆ ವಿವಿಯ ಸಿಬ್ಬಂದಿಯನ್ನು ಎಳೆದಾಡಿ ದರ್ಪ ತೋರಿದರು.
ಇದನ್ನೆಲ್ಲಾ ನೋಡುತ್ತಿದ್ದ ವಿದ್ಯಾರ್ಥಿಗಳು, ಸಭಿಕರು ಏನಿದು ಶಾಸಕರಿಗೆ ಘಟಿಕೋತ್ಸವದ ಶಿಷ್ಟಾಚಾರವೇ ಗೊತ್ತಿಲ್ಲ ಎಂದು ಗುನುಗುತ್ತಿದ್ದರೆ, ಶಾಸಕರ ಬೆಂಬಲಿಗರು ಕುಲಪತಿ ಕೊಠಡಿಗೂ ನುಗ್ಗಿ ಅಲ್ಲೂ ದರ್ಪ ತೋರಿದರು. ಈ ವೇಳೆ ವೇದಿಕೆ ಮೇಲಿದ್ದ ಸಚಿವರು ವಿಷಯ ತಿಳಿದು ಕುಳಿತಲ್ಲಿಂದಲೇ ಶಾಸಕ ಪಠಾಣ್ ಅವರಿಗೆ ಫೋನ್ ಮಾಡಿ, ಶಿಷ್ಟಾಚಾರ ಪಾಠ ಬೋಧಿಸಿದರು.
ವಿಶ್ವವಿದ್ಯಾಲಯದ ಸಿಬ್ಬಂದಿ ಪ್ರತಿಕ್ರಿಯಿಸಿ, ಶಾಸಕರು ಕಾರ್ಯಕ್ರಮದ ಶಿಷ್ಟಾಚಾರವನ್ನು ಅರ್ಥಮಾಡಿಕೊಳ್ಳದೆ ಅಪ್ರಬುದ್ಧವಾಗಿ ವರ್ತಿಸಿದ್ದಾರೆಂದು ಹೇಳಿದ್ದಾರೆ.
ಏತನ್ಮಧ್ಯೆ, ಶಾಸಕ ಪಠಾಣ್ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ನಾನಿನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ ಎಂಬ ಅರಿವು ನನಗಿದೆ. ಆದರೆ, ನನ್ನನ್ನು ಸ್ವಾಗತಿಸದೇ ಇರುವುದು ಬೆಂಬಲಗರಿಗೆ ಬೇಸರ ತಂದಿದ್ದು, ಗದ್ದಲ ಆರಂಭಿಸಿದ್ದಾರೆ. ಶಿಷ್ಟಾಚಾರ ಹೆಸರಿನಲ್ಲಿ ಈ ರೀತಿ ನಡೆದುಕೊಳ್ಳದಂತೆ ವಿವಿ ಸಿಬ್ಬಂದಿಗೆ ಹೇಳಲಾಗಿತ್ತು. ಅಷ್ಟು ಬಿಟ್ಟರೆ ಯಾವುದೇ ಎಚ್ಚರಿಕೆಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.
Advertisement