News highlights 06-12-2024: ಕೇರಳ ಲಾಬಿಗೆ ಸಿಎಂ ಮಣಿದಿದ್ದಾರೆ- ವಿಜಯೇಂದ್ರ; ಬಾಣಂತಿಯರ ಸಾವು: ತಪ್ಪಾಗಿದ್ದರೆ ರಾಜೀನಾಮೆ- ದಿನೇಶ್ ಗುಂಡೂರಾವ್, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಬೆಂಬಲಿಸುವ ಮಸೂದೆಗೆ ಸಂಪುಟ ಸಭೆ ಒಪ್ಪಿಗೆ

News highlights
ಸುದ್ದಿ ಮುಖ್ಯಾಂಶಗಳುonline desk

1. ಬಳ್ಳಾರಿಯಲ್ಲಿ ಮತ್ತೋರ್ವ ಬಾಣಂತಿ ಸಾವು; ನನ್ನ ತಪ್ಪಿದ್ದರೆ ರಾಜೀನಾಮೆ- ದಿನೇಶ್ ಗುಂಡೂರಾವ್

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಬಾಣಂತಿಯರ ಸಾವಿನ ಬಗ್ಗೆ ತನಿಖೆ ನಡೆಸಿ ವರದಿಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಮಧ್ಯೆ ಬಾಣಂತಿಯರ ಸಾವಿನ ಕುರಿತಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಸ್ಪತ್ರೆಯಲ್ಲಿನ ನ್ಯೂನತೆಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ನಮಗೆ ಗೊತ್ತಾಗದೇ ಇನ್ನೆಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ ಗೊತ್ತಿಲ್ಲ. ಔಷಧಿ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ನನ್ನ ತಪ್ಪಿದ್ದರೆ ರಾಜಿನಾಮೆ ಕೊಡಲು ಸಿದ್ದ ಎಂದು ಹೇಳಿದ್ದಾರೆ. ಬಾಣಂತಿಯರ ಸರಣಿ ಸಾವು ಮುಂದುವರಿದಿರುವ ಹಿನ್ನೆಲೆಯಲ್ಲಿ, ಬಿಜೆಪಿ ನಿಯೋಗ ಇಂದು ಲೋಕಾಯುಕ್ತರಿಗೆ ದೂರು ನೀಡಿದೆ. ಬಾಣಂತಿಯರ ಸಾವಿನ ಮೂಲ ಕಾರಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಮನವಿ ಮಾಡಿದೆ. ಬಾಣಂತಿಯರ ಸಾವಿಗೆ ಮೂಲ ಕಾರಣಗಳನ್ನು ತಿಳಿಸುವ ಬದಲು ಸರ್ಕಾರ ಸತ್ಯವನ್ನು ಹತ್ತಿಕ್ಕಲು ಕಾರ್ಯನಿರ್ವಹಿಸಿದೆ ಎಂದು ಬಿಜೆಪಿ ಆರೋಪಿಸಿದೆ.

2. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸುವ ಮಸೂದೆಗೆ ಸಂಪುಟ ಒಪ್ಪಿಗೆ- ಹೆಚ್ ಕೆ ಪಾಟೀಲ್

ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸುವ ಮಸೂದೆಯನ್ನು ಮಂಡಿಸಲು ಸಿದ್ದರಾಮಯ್ಯ ಸಂಪುಟ ನಿರ್ಧರಿಸಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಗುರುತಿಸಲು ನಿಯಮಗಳನ್ನು ಪರಿಷ್ಕರಿಸುವ ಗುರಿಯನ್ನು ಮಸೂದೆ ಹೊಂದಿದೆ. ಇದು 50% ವಿದ್ಯಾರ್ಥಿಗಳು ಮತ್ತು ಮೂರನೇ ಎರಡರಷ್ಟು ಸಿಬ್ಬಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರರಬೇಕು ಎನ್ನುವ ಪ್ರಸ್ತುತ ನಿಯಮವನ್ನು ಸಡಿಲಗೊಳಿಸುತ್ತದೆ.

3. ಬಾಗಲಕೋಟೆ ರೈತರ ಪ್ರತಿಭಟನೆ ವೇದಿಕೆಯಲ್ಲಿ ಸಂಸದ ಗೋವಿಂದ ಕಾರಜೋಳಗೆ ಮುಜುಗರ 

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ನಡೆದ ಹೋರಾಟದ ವೇದಿಕೆಯಲ್ಲಿ ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮುಜುಗರ ಉಂಟಾಗಿದೆ. ಯೋಜನೆಯ 3ನೇ ಹಂತವನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಸಂತ್ರಸ್ತ ಜನಾಂದೋಲನ ಸಮಿತಿ ಬಾಗಲಕೋಟೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ. ವಿಳಂಬದ ವಿಚಾರವಾಗಿ ನಡೆದಿರುವ ಹೋರಾಟ ಬೆಂಬಲಿಸಲು ಬಂದಿದ್ದ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಭಾಷಣದ ವೇಳೆ ಗಲಾಟೆ ನಡೆಯಿತು. ಸಭೆಯಲ್ಲಿದ್ದ ಕೆಲವರು ಎದ್ದು ನಿಂತು ಕಾರಜೋಳ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಅಧಿಕಾರಾವಧಿಯಲ್ಲಿ ಬೃಹತ್ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ದೀರ್ಘಾವಧಿಯ ವಿಳಂಬವಾಗಿತ್ತು ಎಂದು ಟೀಕಿಸಿದರು. ಈ ಆರೋಪಗಳನ್ನು ತಳ್ಳಿ ಹಾಕಿದ ಕಾರಜೋಳ ಅವರು, ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

4. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1.25 ಕೋಟಿ ರೂಪಾಯಿ ಗಾಂಜಾ ವಶಕ್ಕೆ

ಮೂರು ಪ್ರತ್ಯೇಕ ಘಟನೆಗಳಲ್ಲಿ ಬ್ಯಾಂಕಾಂಕ್ ನಿಂದ ಪ್ರಯಾಣಿಸುತ್ತಿದ್ದವರಿಂದ ಕಸ್ಟಮ್ಸ್ ಅಧಿಕಾರಿಗಳು 1.25 ಕೋಟಿ ಮೌಲ್ಯದ 12.5 ಕೆಜಿ ಗಾಂಜಾವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ನವೆಂಬರ್ 30 ಹಾಗೂ ಡಿಸೆಂಬರ್ 1 ರ ರಾತ್ರಿಯವರೆಗೆ ಈ ಘಟನೆ ನಡೆದಿದೆ. ಆರೋಪಿಗಳು ಭಾರತೀಯರಾಗಿದ್ದು ಮೂರೂ ಪ್ರಕರಣಗಳಲ್ಲಿ ಕಾರ್ಯಾಚರಣೆಯ ವಿಧಾನ ಒಂದೇ ಆಗಿತ್ತು. ಗಾಂಜಾ ಉಂಡೆಗಳನ್ನು ಚಿಪ್ಸ್ ಪ್ಯಾಕೆಟ್‌ಗಳಲ್ಲಿ ಮರೆಮಾಚಿದ್ದರು. ಪ್ರಯಾಣಿಕರ ವಿವರಗಳ ಆಧಾರದ ಮೇಲೆ, ಕಸ್ಟಮ್ಸ್ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡು ವ್ಯಾಪಕ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

5. ಕೇರಳ ಲಾಬಿಗೆ ಮಣಿದ ಸಿಎಂ ಸಿದ್ದರಾಮಯ್ಯ- ವಿಜಯೇಂದ್ರ

ಕೇರಳ ಲಾಬಿಗೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ನಂದಿನಿ ಬ್ರ್ಯಾಂಡ್ ನ್ನು ಹಾಳು ಮಾಡಿ ಖಾಸಗಿ ಬ್ರ್ಯಾಂಡ್‌ಗಳನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲಾಗುತ್ತದೆ ಎಂದು ಸುಳ್ಳು ಹರಡಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಹಾಳುಗೆಡವುತ್ತಿದೆ. ನಂದಿನಿಯ ಬಹುನಿರೀಕ್ಷಿತ ಇಡ್ಲಿ–ದೋಸೆ ಹಿಟ್ಟು ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿದೆ. ಐಡಿಯಂತಹ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಸಡ್ಡು ಹೊಡೆದು ಇಡ್ಲಿ/ದೋಸೆ ಹಿಟ್ಟಿನಂತಹ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲೇ KMF MD ಎಂ.ಕೆ. ಜಗದೀಶ್ ಅವರನ್ನು ಹಠಾತ್ ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com