News highlights| ಬಳ್ಳಾರಿ ಆಸ್ಪತ್ರೆಗೆ ಲೋಕಾಯುಕ್ತ ದಿಢೀರ್ ಭೇಟಿ ಪರಿಶೀಲನೆ; ಬಾಣಂತಿಯರ ಸಾವು: ನ್ಯಾಯಾಂಗ ತನಿಖೆಗೆ HDK ಪಟ್ಟು; ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?: ಉಸ್ತುವಾರಿ ಹೇಳಿದ್ದೇನೆಂದರೆ...

News highlights
ಸುದ್ದಿ ಮುಖ್ಯಾಂಶಗಳುonline desk

1. ಬಳ್ಳಾರಿ ಆಸ್ಪತ್ರೆಗೆ ಲೋಕಾಯುಕ್ತ ದಿಢೀರ್ ಭೇಟಿ ಪರಿಶೀಲನೆ

ಬಾಣಂತಿಯರ ಸರಣಿ ಸಾವಿನ ಪ್ರಕರಣದ ಸಂಬಂಧಿಸಿದಂತೆ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಬಳ್ಳಾರಿ ಜಿಲ್ಲಾ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಡ್ರಗ್ಸ್ ಕಂಟ್ರೋಲರ್ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಿಮ್ಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಬಿಮ್ಸ್ ಮತ್ತು ಔಷಧ ವಿಭಾಗದಲ್ಲಿ ಸರ್ಚ್ ವಾರಂಟ್ ಹೊರಡಿಸಿ ವರದಿಯನ್ನು ಸಲ್ಲಿಸಲು ಪೊಲೀಸ್ ವಿಭಾಗಕ್ಕೆ ಲೋಕಾಯುಕ್ತ ಸೂಚನೆ ನೀಡಿದ್ದಾರೆ. ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳ್ಳಾರಿಗೆ ಭೇಟಿ ನೀಡಿದ್ದು, ಮೃತ ಬಾಣಂತಿಯರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಪರಿಹಾರದ ಚೆಕ್ ವಿತರಿಸಿದ್ದಾರೆ. ಈ ಬಳಿಕ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಔಷಧ ಉಗ್ರಾಣ ಪರಿಶೀಲನೆ ನಡೆಸಿದ್ದಾರೆ. ಈಮಧ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಪ್ರಕರಣದ ಬಗ್ಗೆ ಹೈಕೋರ್ಟ್ ನ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟಿರುವ ಸರ್ಕಾರ ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

2. ಕೋವಿಡ್ ನಲ್ಲಿ ಅಕ್ರಮ ಎಸಗಿದವರನ್ನು ಬಿಡುವುದಿಲ್ಲ- ಡಿಕೆ ಶಿವಕುಮಾರ್

ಕೋವಿಡ್ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಅಕ್ರಮ ಎಸಗಿದವರನ್ನು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆಯೋಗದ ಶಿಫಾರಸ್ಸು ಕುರಿತು ವಿಧಾನಸೌಧದಲ್ಲಿ ನಡೆದ ಉಪಸಮಿತಿ ಸಭೆಯ ಬಳಿಕ ಮಾತನಾಡಿರುವ ಡಿಕೆ ಶಿವಕುಮಾರ್, ಸರ್ಕಾರ ಆಯೋಗದ ವರದಿ ಸ್ವೀಕರಿಸಿದೆ. ಸಮಿತಿ ವರದಿಯ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮತ್ತೊಂದು ಕಡೆ ಇಲಾಖೆಯಲ್ಲಿ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ನೀಡಿದ್ದನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಮತ್ತೆ ತನಿಖೆಯಾಗಬೇಕು ಎಂದೂ ಡಿಕೆ ಶಿವಕುಮಾರ್ ಹೇಳಿದ್ದಾರೆ.

3. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಇಲ್ಲ- ಉಸ್ತುವಾರಿ ರಾಧಾಮೋಹನ್ ಅಗರ್ವಾಲ್

ನಗರದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು ಉಪಚುನಾವಣೆ ಸೋಲು, ಬಣ ಜಗಳ ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆದಿದೆ. ಸಭೆಯ ಬಳಿಕ ಮಾತನಾಡಿರುವ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಪಕ್ಷದಲ್ಲಿ ಬಣ ಜಗಳ ಇಲ್ಲ, ನೊಟೀಸ್ ಗೆ ಯತ್ನಾಳ್ ಉತ್ತರ ಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

4. ಮುಡಾ ಪ್ರಕರಣ: ಆರೋಪಿಗಳಿಗೆ ಅಡ್ವೊಕೇಟ್ ಜನರಲ್ ರಕ್ಷಣೆ- ಸ್ನೇಹಮಯಿ ಕೃಷ್ಣ

ಮುಡಾ ಪ್ರಕರಣದಲ್ಲಿ ಆರೋಪಿಗಳನ್ನು ಅಡ್ವೊಕೇಟ್ ಜನರಲ್ ರಕ್ಷಿಸುತ್ತಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿನ ಆಸ್ತಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ನೀಡಿರುವ ಕಾನೂನು ಅಭಿಪ್ರಾಯವನ್ನು ವಿರೋಧಿಸಿ ಸ್ನೇಹಮಯಿ ಕೃಷ್ಣ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ. ಅಭಿಪ್ರಾಯದ ಪ್ರತಿ ತನ್ನ ಬಳಿ ಇದೆ. ಜವಾಬ್ದಾರಿಯುತ ಅಧಿಕಾರಿಯಾಗಿರುವ ನೀವು ಆರೋಪಿಗಳನ್ನು ರಕ್ಷಿಸುವ ಅಭಿಪ್ರಾಯ ನೀಡಿದ್ದೀರಿ. ಈ ಬಗ್ಗೆ ಸ್ಪಷ್ಟೀಕರಣ ಮತ್ತು ಅಧಿಕೃತ ದಾಖಲೆಗಳನ್ನು ಕೇಳುತ್ತಿದ್ದೇನೆ ಎಂದು ಕೃಷ್ಣ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

5. ಪೇಮೆಂಟ್ ಗೇಟ್ ವೇಗೆ ವಂಚನೆ ಸೈಬರ್ ಕಳ್ಳನ ಬಂಧನ

ಪೇಮೆಂಟ್ ಗೇಟ್ ವೇ ಪ್ಲಾಟ್‌ ಫಾರ್ಮ್ ಕ್ಯಾಶ್ ಫ್ರೀ ಕಂಪೆನಿಗೆ 15 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್ ಕಳ್ಳನನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ.ಜೊತೆಗೆ ಆರೋಪಿಗಳು 'ಸಿವೈಸಿಎನ್' ಎಂಬ ನಕಲಿ ಕಂಪನಿ ಹೆಸರನ್ನು ನೋಂದಣಿ ಮಾಡಿಸಿದ್ದರು. ವಿದ್ಯಾರ್ಥಿಗಳ ಸೋಗಿನಲ್ಲಿ ಶುಲ್ಕ ಪಾವತಿಸಿ, ತಮಗೆ ಆರ್ಡರ್ ಮಾಡಿದ ಉತ್ಪನ್ನಗಳು ಲಭ್ಯವಾಗಿಲ್ಲ ಎಂದು ರಿಫಂಡ್ ಗಾಗಿ ಮನವಿ ಸಲ್ಲಿಸುತ್ತಿದ್ದರು. ಕಂಪನಿ ಆರೋಪಿಗಳ ಕಂಪನಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿತ್ತು. ಕಂಪನಿಗೆ ಅನುಮಾನ ಬಂದು ದೂರು ದಾಖಲಾಗಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com