ಬಸವಣ್ಣ ಕುರಿತು ಹೇಳಿಕೆ: ಶಾಸಕ ಯತ್ನಾಳ್ ವಿರುದ್ದ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
ವಿಜಯಪುರ: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆ ನಡೆಸುತ್ತಿವೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಎಂ.ಸಿ. ಮುಲ್ಲಾ ಅವರು ಯತ್ನಾಳ್ ವಿರುದ್ಧ ಕಿಡಿಕಾರಿದ್ದು, ಯತ್ನಾಳ್ ಹೇಳಿಕೆ ಬಸವಣ್ಣನವರಿಗೆ ಮಾತ್ರವಲ್ಲ ಬಸವಣ್ಣನವರ ಜನ್ಮಸ್ಥಳ ವಿಜಯಪುರದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಮಾಡಿದ ಅವಮಾನವಾಗಿದೆ ಎಂದು ಕಿಡಿಕಾರಿದ್ದಾರೆ.
ಬಸವಣ್ಣ ಅವರ ಪರಂಪರೆಯನ್ನು ಮೆಚ್ಚುವ ಮತ್ತು ತಿಳಿದಿರುವ ಯಾವುದೇ ಪ್ರಜ್ಞಾವಂತ ವ್ಯಕ್ತಿ ಇಂತಹ ಅವಮಾನಗಳನ್ನು ಸಹಿಸುವುದಿಲ್ಲ. ಯತ್ನಾಳ್ ಅವರು ಬಸವಣ್ಣ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಾಗಿ ಬೇಷರತ್ ಮತ್ತು ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಯತ್ನಾಳ್ ಅವರು ಇದುವರೆಗೆ ತಮ್ಮ ರಾಜಕೀಯಕ ಮೈಲೇಜಿಗಾಗಿ ಹಿಂದು–ಮುಸ್ಲಿಂ ಕೋಮು ವಿಷಯ ಮಾತನಾಡಿ, ಅರೆಬರೆ ತಲೆಕೆಟ್ಟಿರುವರಂತೆ ವರ್ತಿಸುತ್ತಿದ್ದರು. ಆದರೆ, ಈಗ ಪೂರ್ಣ ತಲೆ ಕೆಟ್ಟವರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಖರ್ಚಿನಲ್ಲಾದರೂ ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯ ಇದೆ. ಇಲ್ಲವಾದರೆ ವಿಜಯಪುರದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನಾವೇ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.
ಯತ್ನಾಳ್ ಹೇಳಿಕೆಗಳಿಂದ ವಿಜಯಪುರ ಜಿಲ್ಲೆಗೆ ನಾಡಿನೆಲ್ಲೆಡೆ ಕೆಟ್ಟ ಹೆಸರು ಬರತೊಡಗಿದೆ. ಹೊರಗಡೆ ಹೋದಾಗ ವಿಜಯಪುರದವರು ಎಂದು ಹೇಳಿಕೊಳ್ಳಲು ನಾಚಿಕೆ ಪಡುವಂತಾಗಿದೆ. ಯತ್ನಾಳಗೆ ಅವರ ತಂದೆ–ತಾಯಿ ಬಸವಣ್ಣನ ಹೆಸರಿಟ್ಟಿದ್ದರು. ಇದೀಗ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಮಾತನಾಡಿ ಹೆಸರಿಟ್ಟ ತಂದೆ, ತಾಯಿಯ ಮರ್ಯಾದೆಯನ್ನು ಅವರು ತೆಗೆದಿದ್ದಾರೆ. ಬಸವಣ್ಣನವರ ಬಗ್ಗೆ ಯತ್ನಾಳ ಅವರಿಗೆ ಕೀಳುಮಟ್ಟದ ಚಿಂತನೆ ಇರುವುದರಿಂದ ಅವರು ಮೊದಲು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ