ಕುನ್ಹಾ ವರದಿ ಶಿಫಾರಸ್ಸಿನಂತೆ ಅಧಿಕಾರಿಗಳಿಂದ ಕೋವಿಡ್ ಅಕ್ರಮ ವಿಚಾರಣೆ; ಹಣ ತಿಂದವರನ್ನು ಬಿಡುವುದಿಲ್ಲ: ಡಿ.ಕೆ ಶಿವಕುಮಾರ್

ನಮ್ಮ ಸರ್ಕಾರ ಕೋವಿಡ್ ಅವಧಿಯಲ್ಲಿನ ಅಕ್ರಮದ ಕುರಿತ ನ್ಯಾ.ಜಾನ್ ಮೈಕಲ್ ಕುನ್ಹಾ ಅವರ ವರದಿಯನ್ನು ಸ್ವೀಕರಿಸಿದ್ದೇವೆ. ಈ ವರದಿಯ ಪರಿಶೀಲನೆಯನ್ನು ಮಾತ್ರ ನಾವು ಮಾಡುತ್ತಿದ್ದೇವೆ.
ಡಿ.ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಕೋವಿಡ್ ಅಕ್ರಮದಲ್ಲಿ ಕುನ್ಹಾ ಅವರ ಸಮಿತಿ ಶಿಫಾರಸ್ಸಿನಂತೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೋವಿಡ್ ಹಣ ತಿಂದವರನ್ನು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನ್ಯಾಯಮೂರ್ತಿ ಮೈಖಲ್ ಕುನ್ಹ ವಿಚಾರಣೆ ಆಯೋಗದ ಶಿಫಾರಸ್ಸು ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಉಸ್ತುವಾರಿ ಹಾಗೂ ಅಧಿಕಾರಿಗಳ ಸಮಿತಿ ವರದಿ ಪರಾಮರ್ಶೆ ಹಾಗೂ ಶಿಫಾರಸ್ಸು ಕುರಿತು ವಿಧಾನಸೌಧದಲ್ಲಿ ಉಪಸಮಿತಿಯು ಶನಿವಾರ ಸಭೆ ನಡೆಸಿತು. ನಂತರ ಸಮಿತಿಯ ಮುಖ್ಯಸ್ಥರಾದ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ನಮ್ಮ ಸರ್ಕಾರ ಕೋವಿಡ್ ಅವಧಿಯಲ್ಲಿನ ಅಕ್ರಮದ ಕುರಿತ ನ್ಯಾ.ಜಾನ್ ಮೈಕಲ್ ಕುನ್ಹಾ ಅವರ ವರದಿಯನ್ನು ಸ್ವೀಕರಿಸಿದ್ದೇವೆ. ಈ ವರದಿಯ ಪರಿಶೀಲನೆಯನ್ನು ಮಾತ್ರ ನಾವು ಮಾಡುತ್ತಿದ್ದೇವೆ. ಉಳಿದಂತೆ ಸಮಿತಿ ವರದಿಯ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮತ್ತೊಂದು ಕಡೆ ಇಲಾಖೆಯಲ್ಲಿ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ. ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಎಷ್ಟು ಪ್ರಕರಣ ದಾಖಲಾಗುತ್ತವೋ ಗೊತ್ತಿಲ್ಲ.

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ನೀಡಿದ್ದನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಮತ್ತೆ ತನಿಖೆಯಾಗಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರೇ ಆ ಆಸ್ಪತ್ರೆಗೆ ಹೋಗಿ ಅಲ್ಲಿನ ಪರಿಸ್ಥಿತಿ ಅಲೋಕನ ಮಾಡಿದ್ದೆವು. 36 ಜನ ಸತ್ತರೆ, ಆಗಿನ ಸಚಿವರು ಕೇವಲ ಮೂರು ಮಂದಿ ಸತ್ತಿದ್ದರು ಎಂದು ಹೇಳಿದ್ದರು. ನಾನು ಮೃತಪಟ್ಟ 36 ಮಂದಿಯ ಮನೆಗಳಿಗೆ ಭೇಟಿ ನೀಡಿದ್ದೇನೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ಮಾಡಿ ಈ ವಿಚಾರಣೆ ಪ್ರಕ್ರಿಯೆ ಪರಿಶೀಲಿಸುತ್ತೇವೆ. ಈ ಸಮಿತಿಯು ಅಧಿಕಾರಿಗಳ ವಿಚಾರಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, 84 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿ 502 ಕೋಟಿ ಬಿಲ್ ಮಾಡಿದ್ದಾರೆ. 400 ಕೋಟಿ ಪಾವತಿ ಮಾಡಲಾಗಿದೆ. 84 ಲಕ್ಷ ಎಂದರೆ ಬೆಂಗಳೂರಿನಲ್ಲಿರುವ ಪ್ರತಿ ಮನೆಗೆ ಇಬ್ಬರಿಗೆ ಪರೀಕ್ಷೆ ಮಾಡಿರಬೇಕು.

ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಂತ್ರಿಕವಾಗಿ ಸಮರ್ಥವಿಲ್ಲದೆ, ಐಸಿಎಂಆರ್ ಅನುಮತಿ ಇಲ್ಲದೆ ಪರೀಕ್ಷೆ ನಡೆಸಲಾಗಿದೆ. 146 ಕೋಟಿ ಬಿಲ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 24 ಲಕ್ಷ ಜನರಿಗೆ ಒಂದೇ ಕಡೆ ಪರೀಕ್ಷೆ ಎಂದರೆ ಅಲ್ಲಿ ಎಷ್ಟು ಜನದಟ್ಟಣೆ, ಸರದಿ ಸಾಲು ಇರಬೇಕು.

ಹೀಗಾಗಿ ಈ ವಿಚಾರದಲ್ಲಿ ವಿಧಾನಸೌಧದಿಂದ ಕೆಳ ಹಂತದವರೆಗೂ ಯಾವ ರೀತಿ ಪ್ರಕ್ರಿಯೆ ಮಾಡಿದ್ದಾರೆ. ಕಾನೂನು ಚೌಕಟ್ಟು ಮೀರಿ ಏನೆಲ್ಲಾ ತೀರ್ಮಾನ ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ವರದಿಯನ್ನು ನಾವು ಪರಿಶೀಲನೆ ಮಾಡುತ್ತೇವೆ." ಎಂದು ತಿಳಿಸಿದರು. ಈ ವರದಿಗಳನ್ನು ಪರಿಶೀಲಿಸಿ, ನಮಗೆ ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ಮಟ್ಟದ ಸಮಿತಿ ರಚಿಸಲಾಗುವುದು. ಈ ಪ್ರಕರಣದಲ್ಲಿ ನಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡಬಾರದು ಎಂದು ಈ ನಿರ್ಧಾರ ಮಾಡಿದ್ದೇವೆ. ಈ ಸಮಿತಿಯು ರಚಿಸಿದ್ದೇವೆ.

ಇದು ರಾಜಕೀಯ ಪಿತೂರಿ ಎಂದು ಮಾಜಿ ಆರೋಗ್ಯ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಕಡೆ ಒಂದು ಮಾತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ. ನಾನು ಅವರ ಸುದ್ದಿಯನ್ನೇ ಮಾತನಾಡಿಲ್ಲ. ಅವರೇಕೆ ಮಾತನಾಡುತ್ತಿದ್ದಾರೆ. ನಾವು ವರದಿಯ ಪ್ರಮುಖ ಅಂಶಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡಿದ್ದೇನೆ ಅಷ್ಟೇ. ಈ ವರದಿಯಲ್ಲಿ ಮೇಲಿಂದ ಕೆಳಗಿನವರೆಗೂ ಅಕ್ರಮದಲ್ಲಿ ಭಾಗಿಯಾಗಿರುವ ಆಯುಕ್ತರು, ಅಧಿಕಾರಿಗಳು, ರಾಜಕಾರಣಿಗಳು, ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳ ವಿರುದ್ಧ ಸೆಕ್ಷನ್ 71 ಹಾಗೂ ಸೆಕ್ಷನ್ 11ರ ಅಡಿಯಲ್ಲಿ ಸಾರ್ವಜನಿಕ ಸೇವೆ ಅವಧಿಯಲ್ಲಿ ಭ್ರಷ್ಟಾಚಾರ ತಡೆಯುವ ಕಾಯ್ದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ” ಎಂದು ತಿಳಿಸಿದರು. ವಿಧಾನಸಭೆಯಲ್ಲಿ ಮಧ್ಯಂತರ ವರದಿ ಮಂಡನೆ ಮಾಡುತ್ತೀರಾ ಎಂದು ಕೇಳಿದಾಗ, ಈ ವಿಚಾರವಾಗಿ ಮುಂದೆ ಮಾತನಾಡುತ್ತೇವೆ ಎಂದು ತಿಳಿಸಿದರು. ಕುನ್ಹಾ ಅವರ ವರದಿ ಆಧಾರದ ಮೇಲೆ ಎಸ್ಐಟಿ ರಚನೆಯಾಗಿದೆಯೇ ಎಂದು ಕೇಳಿದಾಗ, ಇದರ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲವೂ ಅಂತಿಮವಾದ ಬಳಿಕ ನಿಮಗೆ ಮಾಹಿತಿ ನೀಡುತ್ತೇವೆ. ಈ ವಿಚಾರವಾಗಿ ನಾವು ಬಿಜೆಪಿಯವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಸಮಿತಿ ಶಿಫಾರಸ್ಸು ಪರಿಶೀಲಿಸುತ್ತಿದ್ದು, ಅಧಿಕಾರಿಗಳಿಗೆ ವಿಚಾರಣೆಯ ನಡೆಸುವ ಸಂಪೂರ್ಣ ಅಧಿಕಾರ ನೀಡಿದ್ದೇವೆ” ಎಂದು ತಿಳಿಸಿದರು.

ಡಿ.ಕೆ ಶಿವಕುಮಾರ್
ಕೋವಿಡ್-19 ಹಗರಣ: ಕುನ್ಹಾ ಸಮಿತಿ ವರದಿಯಲ್ಲಿ BJP ಅಕ್ರಮ ಬಯಲು, ಕಾನೂನು ಕ್ರಮಕ್ಕೆ ಪ್ರಕ್ರಿಯೆ ಆರಂಭ!

ಮೊದಲ ಸಭೆಯಲ್ಲಿ ಯಾರ ಮೇಲಾದರೂ ಎಫ್ಐಆರ್ ದಾಖಲಿಸುವ ಸೂಚನೆ ನೀಡಲಾಗಿದೆಯೇ ಎಂದು ಕೇಳಿದಾಗ, ಈ ವಿಚಾರವಾಗಿ ಅಧಿಕಾರಿಗಳು ತಮ್ಮ ಕೆಲಸ ಮಾಡಲಿದ್ದಾರೆ. ಅಧಿಕಾರಿಗಳು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಆ ಪ್ರಕ್ರಿಯೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಅಟ್ಟುವುದಾಗಿ ಹೇಳಿದ್ದಿರಿ ಎಂದು ಕೇಳಿದಾಗ, ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿದೆ ಎಂದು ನಾವೇ ವಿಧಾನಸಭೆಯಲ್ಲಿ ಭಾಷಣ ಮಾಡಿದ್ದೇವೆ. ಜನ ಇವುಗಳನ್ನು ನೋಡಿ ರೋಸಿಹೋಗಿದ್ದಾರೆ. ಈಗ ನಾನು ನಿಮಗೆ ಕೇವಲ ಎರಡು ಉದಾಹರಣೆಯನ್ನಷ್ಟೇ ಮಾತ್ರ ಹೇಳಿದ್ದೇವೆ. ಕೋವಿಡ್ ಹಣ ತಿಂದವರನ್ನು ಬಿಡುವುದಿಲ್ಲ ಎಂದು ತಿಳಿಸಿದರು.

ಪಿಪಿಇ ಕಿಟ್ ಹಾಗೂ ಯಂತ್ರೋಪಕರಣ ಖರೀದಿ ಹಗರಣದಲ್ಲಿ ಹಣ ವಸೂಲಿ ಮಾಡಲಾಗಿದೆಯೇ ಎಂದು ಕೇಳಿದಾಗ, ಅಧಿಕಾರಿಗಳು ಪ್ರಕ್ರಿಯೆ ನಡೆಸುತ್ತಿದ್ದಾರೆ. ಕೆಲವರಿಗೆ ನೋಟೀಸ್ ನೀಡಿದ್ದಾರೆ. ಈ ಪ್ರಕ್ರಿಯೆ ಮೇಲ್ವಿಚಾರಣೆ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com