ಕೋವಿಡ್-19 ಹಗರಣ: ಕುನ್ಹಾ ಸಮಿತಿ ವರದಿಯಲ್ಲಿ BJP ಅಕ್ರಮ ಬಯಲು, ಕಾನೂನು ಕ್ರಮಕ್ಕೆ ಪ್ರಕ್ರಿಯೆ ಆರಂಭ!

ಆಗಿನ ಬಿಜೆಪಿ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗ ಸಮಯದಲ್ಲಿ ಸಲಕರಣೆಗಳ ಖರೀದಿಯಲ್ಲಿನ ಅವ್ಯವಹಾರಗಳ ಬಗ್ಗೆ ನ್ಯಾಯಮೂರ್ತಿ ಡಿ'ಕುನ್ಹಾ ಆಯೋಗವು ತನಿಖೆ ನಡೆಸಿದ್ದು, ವರದಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಲಬುರಗಿ: ಕೋವಿಡ್-19 ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ನ್ಯಾ.ಕುನ್ಹಾ ಸಮಿತಿ ವರದಿಯಲ್ಲಿ ಬಹಿರಂಗವಾಗಿದ್ದು, ಸಮಿತಿಯ ವರದಿ ಆಧಾರದ ಮೇಲೆ ಸರ್ಕಾರ ಕಾನೂನು ಕ್ರಮಕ್ಕೆ ಪ್ರಕ್ರಿಯೆ ಆರಂಭಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಮಂಗಳವಾರ ಹೇಳಿದ್ದಾರೆ.

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಗಿನ ಬಿಜೆಪಿ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗ ಸಮಯದಲ್ಲಿ ಸಲಕರಣೆಗಳ ಖರೀದಿಯಲ್ಲಿನ ಅವ್ಯವಹಾರಗಳ ಬಗ್ಗೆ ನ್ಯಾಯಮೂರ್ತಿ ಡಿ'ಕುನ್ಹಾ ಆಯೋಗವು ತನಿಖೆ ನಡೆಸಿದ್ದು, ವರದಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ. ಕೊವಿಡ್ ಸಂದರ್ಭದಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ನೀಡಿ ವೈದ್ಯಕೀಯ ಸಾಧನಗಳು, ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಬಿಜೆಪಿಯು ಹೆಣದ ಮೇಲೆ ಹಣ ಮಾಡಿದೆ. 49 ಕೋಟಿ ರೂಪಾಯಿ ವಸೂಲಿ ಮಾಡಲು ಕುನ್ಹಾ ಸಮಿತಿ ವರದಿ ನೀಡಿದೆ ಹೇಳಿದರು.

ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯಲ್ಲಿ ಭಾರಿ ಮೊತ್ತದ ಭ್ರಷ್ಟಾಚಾರ ಆಗಿದೆ. ಪಿಪಿಇ ಕಿಟ್, ಸಿ.ಟಿ. ಸ್ಕ್ಯಾನರ್, ವೆಂಟಿಲೆಟರ್ ಖರೀದಿಯಲ್ಲಿ ಭಾರಿ ಮೊತ್ತದ ಅವ್ಯವಹಾರವಾಗಿದೆ. ಲಾಭ ಪಡೆಯುವ ಉದ್ದೇಶದಿಂದ ಸಿಎಂ ಮತ್ತು ಆರೋಗ್ಯ ಸಚಿವರು ನೆಚ್ಚಿನ ಪೂರೈಕೆದಾರರಿಗೆ ಗುತ್ತಿಗೆ ನೀಡಲು ಸಂಪೂರ್ಣ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ರಾಜ್ಯ ಸರ್ಕಾರವು ಒಟ್ಟು 18.07 ಲಕ್ಷ ಪಿಪಿಇ ಕಿಟ್‌ಗಳನ್ನು ಸಂಗ್ರಹಿಸಿದೆ. ಈ ಸಂಬಂಧ ಈಗಾಗಲೇ ಇಲಾಖೆ ಹಿಂದಿನ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಸಂಗ್ರಹ ಚಿತ್ರ
ಕೋವಿಡ್ ಹಗರಣ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು- ದಿನೇಶ್ ಗುಂಡೂರಾವ್

ಉಪಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಉಪಸಮಿತಿಯು ನ್ಯಾಯಮೂರ್ತಿ ಡಿ’ಕುನ್ಹಾ ಆಯೋಗ ಸಲ್ಲಿಸಿದ ವರದಿಯನ್ನು ಅಧ್ಯಯನ ಮಾಡಲಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಲಿದ್ದು, ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಕಿಡಿಕಾರಿದ ಅವರು, ಕೋವಿಡ್ ಸಂಕಷ್ಟದಲ್ಲೇ ಹಣ ಮಾಡಲು ಬಿಜೆಪಿ ಹೊರಟಿದ್ದರೂ ಕೂಡ ಆ ಪಕ್ಷದ ಪ್ರಧಾನಮಂತ್ರಿಗಳು ಅಬಕಾರಿ ಇಲಾಖೆಯಲ್ಲಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇಂತಹ ಕೀಳಿ ಹೇಳಿಕೆಯನ್ನ ರಾಜ್ಯ ಬಿಜೆಪಿಯವರು ಪ್ರಧಾನಮಂತ್ರಿಗಳಿಂದ ಹೇಳಿಸುತ್ತಿರುವುದು ನೋಡಿದರೆ ಇದನ್ನು ಕೀಳು ರಾಜಕಾರಣ ಎಂದೇ ಹೇಳಬೇಕು. ಮೋದಯವರಿಂದ ಬಿಜೆಪಿ ಸುಳ್ಳು ಹೇಳಿಸುತ್ತಾ ಪ್ರಧಾನಿ ಹುದ್ದೆ ಘನತೆಗೆ ಮಸಿ ಬಳಿಯುತ್ತಿದೆ ಎಂದು ದೂರಿದರು.

ಬಳಿಕ ಮಾತನಾಡಿದ ಜೇವರ್ಗಿ ಶಾಸಕರೂ ಆಗಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಅವರು, ಬಿಜೆಪಿಯವರು ಕೋವಿಡ್ ಅವಧಿಯಲ್ಲಿ ಹೆಣಗಳ ಮೇಲೆಯೇ ಹಣ ಗಳಿಸಿದ್ದಾರೆ. ಕುನ್ಹಾ ಕಮಿಟಿ ಇದನ್ನೆಲ್ಲಾ ಬಯಲು ಮಾಡಿದೆ. ಇದೀಗ ನ್ಯಾ.ಕುನ್ಹಾ ಸಮಿತಿಯನ್ನೇ ಜರಿಯುತ್ತಿದ್ದಾರೆಂದು ಕಿಡಿಕಾರಿದರು.

ಜನ ಸಂಕಷ್ಟದಲ್ಲಿರುವಾಗ ಹಗರಣ ಮಾಡಿ ಕೋಟ್ಯಾಂತರ ಹಣ ಗಳಿಸುವುದು ಬಿಜೆಪಿಗೆ ಬೇಕಿತ್ತೇ? ಇದು ಜನವಿರೋಧಿ ಧೋರಣೆಯಲ್ಲೇ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com