ಬೆಂಗಳೂರು: ಕೋವಿಡ್ -19 ಸಮಯದಲ್ಲಿ ಉಪಕರಣಗಳು ಮತ್ತು ಔಷಧಿ ಖರೀದಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗವು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ.
ಕೋವಿಡ್ -19 ಸಮಯದಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ "ಲೂಟಿ" ನಡೆದಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಅಂದಿನ ಸರ್ಕಾರವು ಹೆಣಗಳ ಮೇಲೆ ಹಣ ಸಂಪಾದಿಸಿತು. ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿತು" ಎಂಬ ಕಾಂಗ್ರೆಸ್ ಆರೋಪವನ್ನು ತನಿಖಾ ವರದಿ ಸಾಬೀತುಪಡಿಸುತ್ತದೆ" ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
"ಕೋವಿಡ್ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಅವರ ಆಯೋಗ ರಚನೆ ಮಾಡಿದ್ದೆವು. ಅವರು ಸಾವಿರ ಪುಟಗಳ ವರದಿ ಕೊಟ್ಟಿದ್ದಾರೆ. ಆಯೋಗವು ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿದೆ. ನಮ್ಮ ಸಂಪುಟ ಉಪಸಮಿತಿ ಪರಿಶೀಲನೆ ಮಾಡುತ್ತಿದೆ. ಇದು ವೈಯಕ್ತಿಕ ವಿಚಾರಣೆ ಏನಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಆರೋಪ ಮಾಡಿದ್ದೆವು. ನಮ್ಮ ಪಕ್ಷದಿಂದ ತನಿಖೆ ಮಾಡಿ ವರದಿ ಕೊಟ್ಟಿದ್ದೆವು. ಸರ್ಕಾರಕ್ಕೆ ವರದಿ ಒಪ್ಪಿಸಿದ್ದೆವು. ನಿಯಮ ಬದಿಗೊತ್ತಿ ಅಂದು ನಿರ್ಧಾರ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗಕ್ಕೆ ತನಿಖೆಗೆ ಕೊಟ್ಟಿದ್ದೆವು. ಈಗ ಮೊದಲ ರಿಪೋರ್ಟ್ ಕೊಟ್ಟಿದ್ದಾರೆ. ಅಂತಿಮ ವರದಿಯನ್ನೂ ಕೊಡುತ್ತಾರೆ" ಎಂದರು.
ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಸುಮಾರು 14 ಕೋಟಿ ರೂ. ನಷ್ಟವಾಗಿದೆ. ಹೆಚ್ಚಿನ ಬೆಲೆಗೆ ನಿಯಮಗಳ ಉಲ್ಲಂಘಿಸಿ ಪಿಪಿಇ ಕಿಟ್ ಗಳನ್ನು ಖರೀದಿಸಲಾಗಿದೆ. ದೇಶದಲ್ಲಿ ಲಭ್ಯವಿದ್ದರೂ, ಅವುಗಳನ್ನು ಚೀನಾದಿಂದ ಖರೀದಿಸಲಾಗಿದೆ" ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವರದಿಯಲ್ಲಿ ತಮ್ಮ ವಿರುದ್ಧದ ಗಂಭೀರ ಆರೋಪಗಳನ್ನು ಪರಿಗಣಿಸಿ ನವೆಂಬರ್ 13 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆ ಪ್ರಚಾರದಿಂದ ದೂರ ಉಳಿಯುವಂತೆ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರಿಗೆ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ತನಿಖೆಯ ಸಂದರ್ಭದಲ್ಲಿ ಶ್ರೀರಾಮುಲು ನಂತರ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಹಾಲಿ ಸಂಸದ ಕೆ ಸುಧಾಕರ್ ವಿರುದ್ಧ ಆರೋಪ ಹೊರಬೀಳಬಹುದು ಎಂದು ಅವರು ಹೇಳಿದರು.
ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ(ಎಸ್‌ಐಟಿ) ಮತ್ತು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲು ಸರ್ಕಾರ ಕಳೆದ ತಿಂಗಳು ನಿರ್ಧರಿಸಿತ್ತು. ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಏಳು ಸದಸ್ಯರ ಸಂಪುಟ ಉಪಸಮಿತಿಯನ್ನು ರಚಿಸಿದರು.
ವರದಿಯನ್ನು ಉಲ್ಲೇಖಿಸಿ, ಆರೋಗ್ಯ ಸಚಿವರು ಪಿಪಿಇ ಕಿಟ್‌ಗಳ ಖರೀದಿ ದರ ಮತ್ತು ಅದರ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿ, ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದಾಗಿ ಸರ್ಕಾರಕ್ಕೆ 14 ಕೋಟಿ ರೂ. ನಷ್ಟವಾಗಿದೆ. ಯಡಿಯೂರಪ್ಪ ಮತ್ತು ಶ್ರೀರಾಮುಲು ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಆಯೋಗ ಶಿಫಾರಸು ಮಾಡಿದೆ. ಇದರಲ್ಲಿ ಯಾವುದೇ 'ರಾಜಕೀಯ ಸೇಡಿನ' ಉದ್ದೇಶ ಇಲ್ಲ ಎಂದರು.
ಕೋವಿಡ್ ಹಗರಣ"ಆಕ್ಸಿಜನ್ ಸಿಲಿಂಡರ್‌ಗಳು, ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು ಮತ್ತು ಔಷಧಿಗಳ ಖರೀದಿಗೆ ಸಂಬಂಧಿಸಿದಂತೆ ಇನ್ನೂ ಹಲವಾರು ವ್ಯತ್ಯಾಸಗಳಿವೆ. ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ತನಿಖೆಯ ಅಗತ್ಯವಿದೆ ಮತ್ತು ಕೆಲವು ಪ್ರಕರಣಗಳಲ್ಲಿ ನೇರವಾಗಿ ಕ್ರಮ ತೆಗೆದುಕೊಳ್ಳಬಹುದು. ಅದರ ಮುಂದಿನ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅಧಿಕಾರಿಗಳು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು, ಅವರಿಂದ ಪ್ರತಿಕ್ರಿಯೆ ಪಡೆಯಬೇಕು ಎಂದು ಆರೋಗ್ಯ ಸಚಿವರು ಹೇಳಿದರು.
500 ಕೋಟಿ ವಸೂಲಿ ಮಾಡಲು ಆಯೋಗ ಶಿಫಾರಸು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ಸಂಬಂಧ ಉಪಚುನಾವಣೆ ನಂತರ ಪ್ರತ್ಯೇಕ ತಂಡ ರಚಿಸಲು ನಿರ್ಧರಿಸಲಾಗಿದೆ ಮತ್ತು ಅದಕ್ಕೆ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು.
Advertisement