ಕೋವಿಡ್ ಅಕ್ರಮ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು; ರಾಜಕೀಯ ‌ದುರುದ್ದೇಶ ಎಂದ BSY

ನಿವೃತ್ತ ನ್ಯಾಯಮೂರ್ತಿ ಡಿ. ಮೈಕೆಲ್ ಕುನ್ಹಾ ಅವರ ಆಯೋಗ ರಚನೆ ಮಾಡಿದ್ದೆವು. ಅವರು ಸಾವಿರ ಪುಟಗಳ ವರದಿ ಕೊಟ್ಟಿದ್ದರು. ಆಯೋಗವು ಯಡಿಯೂರಪ್ಪ, ಶ್ರೀರಾಮುಲು‌ ವಿರುದ್ಧ ಪ್ರಾಸಿಕ್ಯೂಷನ್​ ಗೆ ಶಿಫಾರಸು ಮಾಡಿದೆ.
BS Yediyurappa and Sriramulu
ಬಿ.ಎಸ್ ಯಡಿಯೂರಪ್ಪ ಮತ್ತು ಶ್ರೀರಾಮುಲು
Updated on

ಬೆಂಗಳೂರು: ಕೋವಿಡ್ ಸಮಯದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ‌ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ನ್ಯಾ.ಮೈಕಲ್ ಡಿ ಕುನ್ನಾ ವರದಿ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ ವಿಚಾರವೇ ಈಗ ಕಾಂಗ್ರೆಸ್ ಸರ್ಕಾರದ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಇನ್ನೂ ನ್ಯಾ.ಮೈಕಲ್ ಡಿ ಕುನ್ನಾ ವರದಿಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸ್ ದಾಖಲಿಸಿ ತನಿಖೆಗೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಮೂರ್ತಿ ಡಿ. ಮೈಕೆಲ್ ಕುನ್ಹಾ ಅವರ ಆಯೋಗ ರಚನೆ ಮಾಡಿದ್ದೆವು. ಅವರು ಸಾವಿರ ಪುಟಗಳ ವರದಿ ಕೊಟ್ಟಿದ್ದರು. ಆಯೋಗವು ಯಡಿಯೂರಪ್ಪ, ಶ್ರೀರಾಮುಲು‌ ವಿರುದ್ಧ ಪ್ರಾಸಿಕ್ಯೂಷನ್​ ಗೆ ಶಿಫಾರಸು ಮಾಡಿದೆ. ನಮ್ಮ‌ ಸಂಪುಟ ಉಪಸಮಿತಿ ಪರಿಶೀಲನೆ ಮಾಡುತ್ತಿದೆ. ಇದು ವೈಯುಕ್ತಿಕ ವಿಚಾರಣೆ ಏನಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಆರೋಪ ಮಾಡಿದ್ದೆವು. ನಮ್ಮ ಪಕ್ಷದಿಂದ ತನಿಖೆ ಮಾಡಿ ವರದಿ ಕೊಟ್ಟಿದ್ದೆವು. ಸರ್ಕಾರಕ್ಕೆ ವರದಿ ಒಪ್ಪಿಸಿದ್ದೆವು. ನಾವು ಅಧಿಕಾರಕ್ಕೆ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗಕ್ಕೆ ತನಿಖೆಗೆ ಕೊಟ್ಟಿದ್ದೆವು. ಈಗ ಮೊದಲ ರಿಪೋರ್ಟ್ ಕೊಟ್ಟಿದ್ದಾರೆ. ಅಂತಿಮ‌ ವರದಿಯನ್ನೂ ಕೊಡುತ್ತಾರೆ ಎಂದರು.

BS Yediyurappa and Sriramulu
ಬಿಜೆಪಿ ಸರ್ಕಾರದ ಅವಧಿಯ ‘ಕೋವಿಡ್ ಹಗರಣ’ ತನಿಖೆಗೆ ಎಸ್‌ಐಟಿ ರಚಿಸಲು ಸಚಿವ ಸಂಪುಟ ಅನುಮೋದನೆ: ಎಚ್ ಕೆ ಪಾಟೀಲ್

ಪಿಪಿಇ ಕಿಟ್ ಖರೀದಿ ಅಕ್ರಮ ಕುರಿತು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ನೋಟಿಸ್ ಕೊಟ್ಟು ಉತ್ತರ ಪಡೆಯಬೇಕು. ಇದು ವ್ಯಾಪಕವಾಗಿರುವುದರಿಂದ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಿದೆ. ನಿಯಮಗಳ ಅಡಿಯಲ್ಲೇ ನಾವು ಹೋಗಬೇಕು. ಇವರು ಲೂಟಿ ಮಾಡಿರುವುದು ಬಹಳ ಸ್ಪಷ್ಟ. ಸಿಎಂ, ಸಚಿವರು ಭಾಗಿಯಾಗಿರೋದು ಸ್ಪಷ್ಟ. ಪಿಪಿಎ ಕಿಟ್ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ.‌ ದೇಶದಲ್ಲಿ ಪಿಪಿಎ ಕಿಟ್ ಖರೀದಿಗೆ ಅವಕಾಶ ಇತ್ತು.‌ ಆದರೆ ಅವರು ಹಾಂಕ್​ಕಾಂಗ್​ನಿಂದ ತರಿಸಿದ್ದಾರೆ. 14 ಕೋಟಿ ಹೆಚ್ಚು ಹಣ ಕಂಪನಿಗೆ ತೆತ್ತಿದ್ದಾರೆ ಎಂದು ದೂರಿದರು.

ಕೋವಿಡ್ ಹಗರಣದ ಕುರಿತು ಸರ್ಕಾರ ಪ್ರಾಸಿಕ್ಯೂಷನ್​ಗೆ ಶಿಫಾರಸು ಮಾಡಿರುವುದರ ಹಿಂದೆ ರಾಜಕೀಯ ‌ದುರುದ್ದೇಶವಿದೆ‌ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾವು ಯಾವ ಹಗರಣವನ್ನೂ‌ ಮಾಡಿಲ್ಲ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಅದು ತುಂಬಾ ಹಳೇಯದು, ರಾಜಕೀಯ ದುರುದ್ದೇಶದಿಂದ ಮತ್ತೆ ಅದನ್ನು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಲಾಭ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಿಂದ ಅವರಿಗೇನೂ ಲಾಭ ಆಗೋದಿಲ್ಲ" ಎಂದು ತಿಳಿಸಿದರು.

ಯಾವ ತನಿಖೆಗೂ ಬೇಕಿದ್ದರೆ ಕೊಡಲಿ, ಉಪಚುನಾವಣೆಯಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲಿ ‌ನಿರೀಕ್ಷೆ ಮೀರಿ ಜನರ ಬೆಂಬಲ ಸಿಗುತ್ತಿದೆ. ಮೋದಿ ಅವರ ಅಪಾರ ಪ್ರಭಾವ ಕೆಲಸ‌ ಮಾಡಲಿದೆ. ಮೂರಕ್ಕೂ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನನ್ನ ಅಧಿಕಾರಾವಧಿಯಲ್ಲಿ ‌ಯಾವ ಹಗರಣವೂ‌ ನಡೆದಿಲ್ಲ. ಪ್ರಾಸಿಕ್ಯೂಷನ್​ಗೆ ನೀಡಿರುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲವನ್ನೂ ನಾವು ಕಾನೂನು ಚೌಕಟ್ಟಿನಲ್ಲಿ ಅನುಷ್ಠಾನ ಮಾಡಿದ್ದೇವೆ. ದುರುದ್ದೇಶ‌‌ ಪೂರಕವಾಗಿ ಕೇಸ್ ದಾಖಲಿಸುವುದು,‌ ವಿಚಾರಣೆಗೆ ಅನುಮತಿ ‌ನೀಡುವುದು ನಡೆದಿದೆ.‌ ಶ್ರೀರಾಮುಲು ಕೋವಿಡ್ ವೇಳೆಯಲ್ಲಿ ‌ಯಾವುದೇ ಹಗರಣ ಮಾಡಿಲ್ಲ. ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಎಲ್ಲವನ್ನೂ ನಾವು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ ಎನ್ನುವ ವಿಶ್ವಾಸವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com