
ಬೆಳಗಾವಿ: ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು ಈ ಕುರಿತು ನಡೆದ ಪೊಲೀಸ್ ಲಾಠಿ ಚಾರ್ಜ್ ಖಂಡಿಸಿ ಡಿಸೆಂಬರ್ 12ರಂದು ರಾಜ್ಯಾದ್ಯಂತ ಪ್ರತಿಭಟನೆ ಘೋಷಣೆ ಮಾಡಲಾಗಿದೆ.
ಹೌದು.. ಲಾಠಿಚಾರ್ಜ್ ಮಾಡಿದ ಸರ್ಕಾರದ ಕ್ರಮ ಖಂಡಿಸಿ ಡಿ.12ರಂದು ರಾಜ್ಯದಾದ್ಯಂತ ಹೋರಾಟ ಮಾಡಲು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನೀವು ಮಾಡಿದ ದಬ್ಬಾಳಿಕೆಯಿಂದ ಈ ಹೋರಾಟ ರಾಜ್ಯದಾದ್ಯಂತ ತೀವ್ರ ಸ್ವರೂಪ ಪಡೆಯಲಿದೆ. ತಡೆದು ತೋರಿಸಿ’ ಎಂದೂ ಸವಾಲು ಹಾಕಿದರು.
ಅಲ್ಲದೇ ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಹಾಗೂ ಎಸ್ಪಿಯನ್ನು ಅಮಾನತು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಸ್ಪಷ್ಟನೆ
ಇನ್ನು ಇತ್ತ ಲಾಠಿಚಾರ್ಜ್ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಐಜಿಪಿ, ಡಿಸಿ, ಕಮಿಷನರ್ ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿ ಲಾಠಿಚಾರ್ಜ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿ ಮೊಹ್ಮದ್ ರೋಷನ್, '2 ದಿನದ ಹಿಂದೆ ಪಂಚಮಸಾಲಿ ಹೋರಾಟದ ಅರ್ಜಿ ಇತ್ತು. ಅದರ ಮೇಲೆ ಜಿಲ್ಲಾಡಳಿತದಿಂದ ನಿರ್ಬಂಧ ವಿಧಿಸಿತ್ತು. ಡಿಸಿ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದ್ರೆ, ನಿನ್ನೆ ಪಂಚಮಸಾಲಿ ಸ್ವಾಮೀಜಿ ಜೊತೆಗೆ ಸಭೆ ಮಾಡಿದ್ವಿ. ಇದರಲ್ಲಿ ಹೋರಾಟದ ಕುರಿತು ಚರ್ಚೆ ಮಾಡಲಾಗಿತ್ತು. ಹೋರಾಟಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ವಿ. ಬೆಳಗಾವಿಗೆ ಹೋರಾಟಗಾರರು, ಮುಖಂಡರು ಬರಬಹುದು. ಇವರ ಮೇಲೆ ಯಾವುದೇ ನಿಷೇಧ ಇಲ್ಲ.
ಶಾಂತಿಯುತವಾಗಿ ಹೋರಾಟ ನಡೆಸುವಂತೆ ಆದೇಶ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಪ್ರತಿಭಟಿಸಲು ಹೈಕೋರ್ಟ್ ಆದೇಶ ಇದ್ದು, ಹೈಕೋರ್ಟ್ ಆದೇಶವನ್ನ ನಾವು ಪಾಲನೆ ಮಾಡಿದ್ದೇವೆ. ಲಾಠಿಚಾರ್ಜ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾತನಾಡಿ, 'ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ. ಹೋರಾಟ ಮಾಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು. ಶಾಂತವಾಗಿ ಧರಣಿ ಮಾಡಿ ಎಂದು ಅನುಮತಿ ಕೊಟ್ಟಿದ್ವಿ. ಈ ಸಂಬಂಧ ನಿನ್ನೆ ರಾತ್ರಿ ಸಮಾಜದ ಮುಖಂಡರ ಜತೆ ಸಭೆ ಮಾಡಿದ್ವಿ. ಹೈಕೋರ್ಟ್ ಆದೇಶ ಪ್ರತಿ ಕೂಡ ಅವರಿಗೆ ತೋರಿಸಿದ್ದೆವು ಎಂದು ಹೇಳಿದ್ದಾರೆ.
ಲಾಠಿ ಚಾರ್ಜ್ ಖಂಡಿಸಿದ ಬಿಜೆಪಿ
ಇನ್ನು ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಅನ್ನು ಬಿಜೆಪಿ ಖಂಡಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಶ್ರೀರಾಮುಲು, 'ಪಂಚಮಸಾಲಿ ಮೀಸಲಾತಿ ಹೊರಾಟದ ಸಾನಿಧ್ಶ ವಹಿಸಿರುವ ಪಂಚಮಸಾಲಿ ಲಿಂಗಾಯಿತ ಸಮಾಜದ ಪರಮ ಪೂಜ್ಯ ಬಸವ ಮೃತ್ಯುಂಜಯ ಸ್ವಾಮೀಜಿಯೊಂದಿಗೆ ದೂರವಾಣಿಯಲ್ಲಿ ತಾವು ಮಾತನಾಡಿ ..ಶಾಂತಿಯುತ ಹೋರಾಟ ಮಾಡುವರನ್ನು ಲಾಠಿಚಾರ್ಜ್ ಮಾಡಿಸಿ ಗುಂಡಾ ಧೋರಣೆ ಅನುಸರಿಸೀರುವ ಸರ್ಕಾರಕ್ಕೆ ನನ್ನ ದಿಕ್ಕಾರ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಬಸನಗೌಡ ಪಾಟೀಲ್ ಯತ್ನಾಳ್ ಈ ಕುರಿತು ಟ್ವೀಟ್ ಮಾಡಿದ್ದು, 'ಬೆಳಗಾವಿ ನಗರದಲ್ಲಿ ಇಂದು ಪಂಚಮಸಾಲಿ 2ಎ ಮೀಸಲಾತಿ ಹಾಗೂ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಶಾಂತವಾಗಿ ನಡೆಸುತ್ತಿದ್ದ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟ ಹತ್ತಿಕ್ಕಲು ಪೊಲೀಸರು ನಡೆಸಿದ ಲಾಠಿಚಾರ್ಜ್ ದಿಂದ ಗಾಯಗೊಂಡು, ಕೆ.ಎಲ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.
Advertisement