ಬೆಂಗಳೂರು: ಬಳ್ಳಾರಿಯ ಬೀಮ್ಸ್ ನಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವಂತೆಯೇ ಮತ್ತೆ ಐವರು ಬಾಣಂತಿಯರು ಸಾವನ್ನಪ್ಪಿರುವುದು ರಾಯಚೂರು ಹಾಗೂ ಚಿತ್ರದುರ್ಗದಲ್ಲಿ ವರದಿಯಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಸಿಂಧನೂರು ತಾಲೂಕಿನ ತಾಲೂಕ್ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಚಂದ್ರಕಲಾ (26) ರೇಣುಕಮ್ಮ (32) ಮೌಸಮಿ ಮಂದಾಲ್ (22) ಚನ್ನಮ್ಮ (25) ಎಂದು ಗುರುತಿಸಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಹೆರಿಗೆಯಾದ 300 ಗರ್ಭಿಣಿಯರ ಪೈಕಿ ಏಳು ಮಂದಿ ಗಂಭೀರ ಪರಿಸ್ಥಿತಿಗೆ ತೆರಳಿದ್ದರೆ, ನಾಲ್ವರು ಸಾವನ್ನಪ್ಪಿದ್ದರು. ಇವರೆಲ್ಲರೂ ಸೀಜರೀಯನ್ ಸರ್ಜರಿಗೆ ಒಳಗಾಗಿದ್ದರು.
ಅಕ್ಟೋಬರ್ 21 ರಂದು ಚನ್ನಮ್ಮ ಮಗುವಿಗೆ ಜನ್ಮ ನೀಡಿದ 9 ದಿನಗಳ ಬಳಿಕ ಮೃತಪಟ್ಟಿದ್ದರು. ಮೌಸಮಿ ಅಕ್ಟೋಬರ್ 22 ರಂದು ಮಗುವಿಗೆ ಜನ್ಮ ನೀಡಿದ ಮಾರನೇ ದಿನವೇ ಸಾವನ್ನಪ್ಪಿದ್ದರು. ಇನ್ನೂ ಅಕ್ಟೋಬರ್ 31 ರಂದು ಹೆರಿಗೆಯಾದ ರೇಣುಕಮ್ಮ ಮಾರನೇ ದಿನವೇ ಮೃತಪಟ್ಟಿದ್ದರು. ತಾಯಂದಿರು ಪರಿಸ್ಥಿತಿ ಗಂಭೀರವಾದ ಕೂಡಲೇ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (RIMS) ಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಅವರು ಸಾವನ್ನಪ್ಪಿದ್ದು, ನ್ಯಾಯ ಕೊಡಿಸಬೇಕು ಎಂದು ಮೃತರ ಕುಟುಂಬಸ್ಛರು ಒತ್ತಾಯಿಸಿದ್ದಾರೆ.
ಮೃತರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ಬೆಳಗಾವಿಯ ಸುವರ್ಣ ಸೌಧದ ಎದುರು ಶಿಶುಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ವಿವಿಧ ಕಾರಣಗಳಿಂದ ಬಾಣಂತಿಯರ ಸಾವಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಕೆ ನಿತೀಶ್ ತಿಳಿಸಿದ್ದಾರೆ. IV fluids ನಿಂದ ಸಾವು ಸಂಭವಿಸಿವೆಯೇ ಎಂಬುದನ್ನು ಒಂದು ವಾರದೊಳಗೆ ಕಂಡುಹಿಡಿಯಲಾಗುವುದು. ಈ ಬಗ್ಗೆ ವರದಿ ಸಲ್ಲಿಸಿದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಚಳ್ಳಕರೆ ಬಳಿಯ ಜಾಗನೂರುಹಟ್ಟಿ ನಿವಾಸಿ ರೋಜಾ (24)ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ ಆಕೆ, ಹೆರಿಗೆಯಾದ ಐದು ದಿನಗಳ ನಂತರ ಮನೆಗೆ ವಾಪಸ್ ಬಂದಿದ್ದರು. ಅವರು ಕೂಡಾ ಸಿಜರೀಯನ್ ಚಿಕಿತ್ಸೆಗೆ ಒಳಗಾಗಿದ್ದರು.
ಹೆರಿಗೆಯಾದ 40 ದಿನಗಳ ನಂತರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹಲವು ಬಾರಿ ವಾಂತಿ ಮಾಡಿಕೊಂಡಿದ್ದಾರೆ. ಹೀಗಾಗಿ ಮತ್ತೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಿದಾಗ ಅವರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು,ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೋಜಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.
Advertisement