
ಬೆಂಗಳೂರು: ದೂರದೃಷ್ಟಿಯುಳ್ಳ, ಮುತ್ಸದ್ದಿ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವೈಜ್ಞಾನಿಕ ವಿಧಾನದೊಂದಿಗೆ ತಜ್ಞರು ಮತ್ತು ಅಧಿಕಾರಿಗಳು ನೀಡುತ್ತಿದ್ದ ವರದಿಗಳ ಆಧಾರದ ಮೇಲೆ ಕೃಷಿ ಮತ್ತು ಗ್ರಾಮೀಣ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದರು.
ಮಧ್ಯಾಹ್ನದ ಬಿಸಿಯೂಟ ಯೋಜನೆ: ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಮೋಡ ಬಿತ್ತನೆಯಂತಹ ಯೋಜನೆಗಳು ನಿರೀಕ್ಷಿತ ಫಲಿತಾಂಶವನ್ನು ನೀಡಲಿಲ್ಲ, ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪೌಷ್ಟಿಕಾಂಶದ ಊಟವನ್ನು ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಅಗಾಧ ಪರಿಣಾಮವನ್ನು ಬೀರಿತು. 2002-03ರಲ್ಲಿ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟವನ್ನು ಜಾರಿಗೆ ತರಲಾಯಿತು. ಇದು ಕೃಷಿ ಕಾರ್ಮಿಕರ ಮಕ್ಕಳ ಜೀವನದಲ್ಲಿ ನಿಜವಾಗಿಯೂ ಗೇಮ್ ಚೆಂಜರ್ ಆಯಿತು. ಶಾಲೆಗಳಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಕ್ಷೀಣಿಸಿತು.
ಈ ಯೋಜನೆ ಜಾರಿಗೂ ಮುನ್ನಾ ಕೃಷಿ ಕಾರ್ಮಿಕರು ಮತ್ತು ಬಿಪಿಎಲ್ ಕುಟುಂಬಗಳ ಮಕ್ಕಳು ತರಗತಿಗಳಿಗೆ ಹೆಚ್ಚಾಗಿ ಹಾಜರಾಗುತ್ತಿರಲಿಲ್ಲ. ಆದರೆ ಯೋಜನೆ ಪ್ರಾರಂಭವಾದ ನಂತರ ಅವರು ಊಟಕ್ಕಾಗಿಯೇ ಶಾಲೆಯಲ್ಲಿಯೇ ಇರುತ್ತಿದ್ದರು. ಕೆಲವು ಅಡೆತಡೆಗಳ ನಡುವೆಯೂ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಯಿತು. ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಶೇ.40 ರಿಂದ ಶೇ. 18ಕ್ಕೆ ಇಳಿದಿತ್ತು.
ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ರಚನೆಯು ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಿತು.
ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು 40 ಲಕ್ಷಕ್ಕೂ ಹೆಚ್ಚು ರೈತರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿತು. ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸ ಡಾ. ದೇವಿ ಪ್ರಸಾದ್ ಶೆಟ್ಟಿ ಅವರಂತಹ ತಜ್ಞರೊಂದಿಗೆ ಚರ್ಚಿಸಿ ಯೋಜನೆ ಜಾರಿಗೆ ತಂದಿದ್ದರು. ಕುತೂಹಲದ ಸಂಗತಿಯೆಂದರೆ, ನೇತ್ರಾವತಿ ನದಿ ತಿರುವು ಯೋಜನೆಗೆ ವರದಿ ನೀಡಲು ಜಿಎಸ್ ಪರಮಶಿವಯ್ಯ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಿದ್ದು ಕೂಡಾ ಕೃಷ್ಣ ಅವರೇ, ಅದು ಅಂತಿಮವಾಗಿ ಎತ್ತಿನಹೊಳೆ ಯೋಜನೆಯಾಗಿ ಹೊರಹೊಮ್ಮಿತು.
ಆಗಸ್ಟ್ 2003 ರಲ್ಲಿ ನೀರಾವರಿ ಪಂಪ್ ಸೆಟ್ ಗಳ ವಿದ್ಯುತ್ ಬಾಕಿ ರೂ.331 ಕೋಟಿ ಸೇರಿದಂತೆ ರೂ. 856 ಕೋಟಿ ಪ್ಯಾಕೇಜ್ ನ್ನು ಕೃಷ್ಣ ಅವರ ಸಂಪುಟ ಘೋಷಿಸಿತ್ತು. ಪ್ಲೇವಿನ್ ಆನ್‌ಲೈನ್ ಲಾಟರಿ ಪರಿಚಯಿಸಿದಾಗ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಸೇರಿದಂತೆ ಹಲವರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಲಾಟರಿಯ ಪ್ರಭಾವವನ್ನು ತಜ್ಞರು ದೃಢೀಕರಿಸಿದರೆ ಅದನ್ನು ನಿಷೇಧಿಸುವ ಬಗ್ಗೆ ಯೋಚಿಸುವುದಾಗಿ ಕೃಷ್ಣ ವಿಧಾನಸಭೆಯಲ್ಲಿ ಹೇಳಿದ್ದರು.
ಕೃಷ್ಣ ಸರ್ಕಾರದಲ್ಲಿ ರಾಗಿಗೆ ಬೆಳೆ ವಿಮೆ ಮತ್ತು ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಲಾಗಿತ್ತು. ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯ ತಜ್ಞರ ಶಿಫಾರಸುಗಳ ಮೇರೆಗೆ ಎಸ್.ಎಂ.ಕೃಷ್ಣ ಅವರು 5 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರಿಂದ ಜೈವಿಕ ತಂತ್ರಜ್ಞಾನ ಸಂಶೋಧನೆಗೆ ಉತ್ತೇಜನ ನೀಡಲಾಗಿತ್ತು ಎಂದು ಕೃಷ್ಣ ಸಂಪುಟದಲ್ಲಿ ಕೃಷಿ ಖಾತೆ ಹೊಂದಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ತೆಂಗು ಹುಳ ರೋಗಕ್ಕೆ ಕೀಟನಾಶಕ ಖರೀದಿಗೆ ಸಂಬಂಧಿಸಿದಂತೆ ಜಯಚಂದ್ರ ವಿರುದ್ಧ ಆರೋಪ ಬಂದಾಗ ಕೃಷ್ಣ ಅವರನ್ನು ಸಂಪುಟದಿಂದ ತೆಗೆದು ನವದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯನ್ನಾಗಿ ಮಾಡಿದರೂ ನಂತರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಅವರ ತವರು ಜಿಲ್ಲೆ ಮಂಡ್ಯದ ಉಸ್ತುವಾರಿಯನ್ನು ವಹಿಸಿದ್ದರು.
Advertisement