Karnataka Assembly: ಸ್ಪೀಕರ್ ಕಚೇರಿಗೆ ನುಗ್ಗಿದ BJP ಶಾಸಕರು, UT Khader ಜತೆ ಜಗಳ, ಉದ್ವಿಗ್ನ ಪರಿಸ್ಥಿತಿ

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಹಾಗೂ ವಿಧಾನಪರಿಷತ್​ ನಲ್ಲಿ ಈ ಸಂಬಂಧ ಸದನಲ್ಲಿ ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.
BJP MLAs storm Speakers chamber
ಸ್ಪೀಕರ್ ಕಚೇರಿಗೆ ನುಗ್ಗಿದ BJP ಶಾಸಕರು
Updated on

ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣ ಬೆಳಗಾವಿ ಅಧಿವೇಶನದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು, ಇತ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಸದಸ್ಯರು ನೇರವಾಗಿ ಸ್ಪೀಕರ್ ಕಚೇರಿಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ವರದಿಯಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಹಾಗೂ ವಿಧಾನಪರಿಷತ್​ ನಲ್ಲಿ ಈ ಸಂಬಂಧ ಸದನಲ್ಲಿ ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಹಿನ್ನಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಸದನವನ್ನು ಕೊಂಚ ಸಮಯ ಮುಂದೂಡಿದರು.

ಇದರಿಂದ ಕೆರಳಿದ ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್​ ಜೊತೆ ಜಗಳಕ್ಕೆ ಬಿದ್ದಿದ್ದಾರೆ. ಸ್ಪೀಕರ್ ಕಚೇರಿಯಲ್ಲಿ ಖಾದರ್​ ಜೊತೆ ಏರು ಧ್ವನಿಯಲ್ಲೇ ಜಗಳ ಮಾಡಿದ್ದಾರೆ. ಅಲ್ಲದೇ ಸ್ಪೀಕರ್​ ಕಚೇರಿಯ ಮೇಜು ಗುದ್ದಿ ಖಾದರ್​ ಅವರ ಜೊತೆ ಏರು ಧ್ವನಿಯಲ್ಲೇ ಜಗಳ ಮಾಡಿದ್ದಾರೆ.

BJP MLAs storm Speakers chamber
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತ್ನಾಳ್ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಮೂಲಗಳ ಪ್ರಕಾರ ಶಾಸಕ ಸುನೀಲ್ ಕುಮಾರ್, ವಿಪಕ್ಷ ನಾಯಕ ಅಶೋಕ್, ವಿಜಯೇಂದ್ರ, ಅರವಿಂದ್ ಬೆಲ್ಲದ್, ಸಿದ್ದು ಸವದಿ, ಸುರೇಶ್ ಗೌಡ ಸೇರಿದಂತೆ ಬಿಜೆಪಿ ಶಾಸಕರು ಸ್ಪೀಕರ್ ಕಚೇರಿಯಲ್ಲಿ ಖಾದರ್ ಅವರ ಜೊತೆ ವಾಗ್ದಾದ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಶಾಸಕರು ಸ್ಪೀಕರ್ ಜೊತೆ ಜಗಳದ ವಿಷಯ ತಿಳಿಯುತ್ತಿದ್ದಂತೆಯೇ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಸ್ಥಳಕ್ಕೆ ದೌಡಾಯಿಸಿ ಸ್ಪೀಕರ್ ಯುಟಿ ಖಾದರ್ ಬೆಂಬಲಕ್ಕೆ ನಿಂತರು. ಹೀಗಾಗಿ ಎರಡೂ ಕಡೆಯಿಂದ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಸ್ಪೀಕರ್ ಕಚೇರಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು.

ಇಷ್ಟಕ್ಕೂ ಸದನದಲ್ಲಿ ಆಗಿದ್ದೇನು?

ಲಾಠಿ ಚಾರ್ಜ್ ವಿಚಾರವಾಗಿ ಸದನದಲ್ಲಿ ಗೃಹ ಸಚಿವರ ಮಾತಿನ ಬಳಿಕ ಸಿಸಿ ಪಾಟೀಲ್ ಮಾತಿಗೆ ಅವಕಾಶ ನೀಡಲಾಗಿತ್ತು. ಆದರೆ ಏಕಾಏಕಿ ಸಿಸಿ ಪಾಟೀಲ್ ಬದಲಿಗೆ ಕೃಷ್ಣ ಭೈರೆಗೌಡರಿಗೆ ಅವಕಾಶ ನೀಡಲಾಯಿತು. ಈ ನಡುವೆ ವಿಜಯಾನಂದ್ ಕಾಶಪ್ಪನವರ್ ಸಹ ಮಾತನಾಡಿ, RSS ಪ್ರೇರಿತ ಕಲ್ಲುತೂರಾಟ ಎಂದು ಜರಿದರು. ಶೇ.4 ರಷ್ಟು ಇದ್ದ ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಸಮಾನವಾಗಿ ಮರುಹಂಚಿಕೆ ಮಾಡುವ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವನ್ನು ಸ್ವತಃ ಪಂಚಮಸಾಲಿ ಲಿಂಗಾಯತ ಸಮುದಾಯದ ಮುಖಂಡರೂ ಕೂಡ ಆಗಿರುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಟೀಕಿಸಿದಾಗ ವ್ಯಾಪಕ ಸಂಘರ್ಷ ನಡೆಯಿತು.

ಅಲ್ಲದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಮೀಸಲಾತಿ ಬದಲಾವಣೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡುವ ಮೂಲಕ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಚುನಾವಣೆ ಸಲುವಾಗಿ, ಅವರು ಮೀಸಲಾತಿಯನ್ನು ಘೋಷಿಸಿದರು, ಆದರೆ ನಂತರ ಅವರು ಅದನ್ನು ಮುಂದುವರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ ಎಂದು ಹೇಳಿದರು.

BJP MLAs storm Speakers chamber
ಪಂಚಮಸಾಲಿ ಪ್ರತಿಭಟನೆಯನ್ನು ಸರ್ಕಾರ ಲಾಠಿ ಚಾರ್ಜ್ ಮೂಲಕ ಹತ್ತಿಕ್ಕುತ್ತಿದೆ: ಜಯಮೃತ್ಯುಂಜಯ ಶ್ರೀ ಆರೋಪ

ಇದರಿಂದ ಆಕ್ರೋಶಗೊಂಡ ಬಿಜೆಪಿ ಶಾಸಕರು, ಕಾಶಪ್ಪನವರ್​​ ಹೇಳಿಕೆಯನ್ನು ಖಂಡಿಸಿ ಗಲಾಟೆ ಆರಭಿಸಿದರು. ಕೆಲ ನಾಯಕರು ಏರು ಧ್ವನಿಯಲ್ಲೇ ಕೂಗಾಡಿದರು. ಎರಡೂ ಕಡೆಯಿಂದ ಗಲಾಟೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಪೀಕರ್​ ಸದನವನ್ನು ಕೊಂಚ ಸಮಯ ಮುಂದೂಡಿದರು.

ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಸದಸ್ಯರು ನೇರವಾಗಿ ಸ್ಪೀಕರ್ ಕಚೇರಿಗೆ ತೆರಳಿ ಯುಟಿ ಖಾದರ್​ ಜೊತೆ ಜಗಳಕ್ಕೆ ಬಿದ್ದಿದ್ದರು. ಲಾಠಿ ಚಾರ್ಜ್‌ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿಲ್ಲವೆಂದು ಸ್ಪೀಕರ್ ಜತೆ ವಾಗ್ವಾದಕ್ಕೀಳಿದರು.

ಸ್ಪೀಕರ್ ವಿರುದ್ಧ ವಿಪಕ್ಷ ನಾಯಕ ಆಕ್ರೋಶ

ಇನ್ನು ಈ ಸಂಬಂಧ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, 'ಸ್ಪೀಕರ್‌ ಯು.ಟಿ.ಖಾದರ್‌ ಮನಸೋ ಇಚ್ಛೆ ಅಧಿವೇಶನ ನಡೆಸುತ್ತಿದ್ದಾರೆ. ಸದನಕ್ಕೆ ಗೌರವ ಕೊಡಬೇಕು, ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಪಾಯಿಂಟ್ ಆಫ್ ಆರ್ಡರ್ ಎತ್ತಿದರೂ ಗಮನವಿಲ್ಲ. ಪಂಚಮಸಾಲಿಗರ ಮೇಲೆ ದಬ್ಬಾಳಿಕೆ, ದೌರ್ಜನ್ಯದ ಬಗ್ಗೆ ಚರ್ಚೆಯಾಗಬೇಕು. ಸ್ಪೀಕರ್ ಮೂಲಕ ರಾಜ್ಯ ಸರ್ಕಾರ ವಿಷಯಾಂತರ ಮಾಡುತ್ತಿದೆ. ಸ್ಪೀಕರ್‌ ಯು.ಟಿ.ಖಾದರ್‌ ನಡವಳಿಕೆಯಲ್ಲಿ ಬದಲಾವಣೆ ಆಗಿಲ್ಲ. ಖಾದರ್‌ ಸ್ಪೀಕರ್ ಘನತೆಗೆ ಅಗೌರವ ತೋರಿದ್ದಾರೆ.. ಸದನದಲ್ಲಿ ಇದು ಮುಂದುವರೆದರೆ ನಾವು ಸದನಕ್ಕೆ ಬರುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com