News Headlines 12-12-24 | ಪಂಚಮಸಾಲಿ ಹೋರಾಟ: ಸ್ಪೀಕರ್ ಖಾದರ್ ಜೊತೆ BJP ಶಾಸಕರ ವಾಗ್ವಾದ; ತೇಜಸ್ವಿ ಸೂರ್ಯ, ಯತ್ನಾಳ್ ವಿರುದ್ಧದ FIR ರದ್ದು; ಬೆಂಗಳೂರಿಗೆ ಮಳೆಯ ಎಚ್ಚರಿಕೆ!

News Headlines 12-12-24 | ಪಂಚಮಸಾಲಿ ಹೋರಾಟ: ಸ್ಪೀಕರ್ ಖಾದರ್ ಜೊತೆ BJP ಶಾಸಕರ ವಾಗ್ವಾದ; ತೇಜಸ್ವಿ ಸೂರ್ಯ, ಯತ್ನಾಳ್ ವಿರುದ್ಧದ FIR ರದ್ದು; ಬೆಂಗಳೂರಿಗೆ ಮಳೆಯ ಎಚ್ಚರಿಕೆ!

1. ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಚ್: ಸ್ಪೀಕರ್ ಜೊತೆ BJP ಶಾಸಕರ ವಾಗ್ವಾದ

ಪಂಚಮಸಾಲಿ ಹೋರಾಟಗಾರ ಮೇಲಿನ ಲಾಠಿ ಚಾರ್ಜ್ ಪ್ರಕರಣ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಪ್ರತಿಧ್ವನಿಸಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಲಾಠಿ ಚಾರ್ಜ್ ಮಾಡಿದ ಪೊಲೀಸರ ಕ್ರಮವನ್ನು ಖಂಡಿಸಿದರು. ಸದನದ ಕಲಾಪವನ್ನು ಮುಂದುವರಿಯಬೇಕೆಂದರೆ ಘಟನೆಯ ಕುರಿತು ಸರ್ಕಾರ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ಪರಿಣಾಮವಾಗಿ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಸದನವನ್ನು ನಿಮಿಷಗಳ ಕಾಲ ಮುಂದೂಡಿದರು. ಇದರಿಂದ ಕೆರಳಿದ ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಜೊತೆ ಜಗಳಕ್ಕೆ ಇಳಿದಿದ್ದರು. ಸ್ಪೀಕರ್ ಕಚೇರಿಗೆ ತೆರಳಿದ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ವಿಪಕ್ಷ ನಾಯಕ ಅಶೋಕ್, ವಿಜಯೇಂದ್ರ, ಅರವಿಂದ್ ಬೆಲ್ಲದ್ ಸೇರಿದಂತೆ ಬಿಜೆಪಿ ಶಾಸಕರು ಖಾದರ್ ಅವರ ಜೊತೆ ವಾಗ್ದಾದ ನಡೆಸಿದರು. ಸ್ಪೀಕರ್ ಜೊತೆ ಬಿಜೆಪಿ ಶಾಸಕರ ಜಗಳದ ವಿಷಯ ತಿಳಿಯುತ್ತಿದ್ದಂತೆಯೇ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಸ್ಥಳಕ್ಕೆ ದೌಡಾಯಿಸಿ ಯುಟಿ ಖಾದರ್ ಬೆಂಬಲಕ್ಕೆ ನಿಂತರು. ಹೀಗಾಗಿ ಎರಡೂ ಕಡೆಯಿಂದ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಸ್ಪೀಕರ್ ಕಚೇರಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

2. ಸಂಸದ ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್ ವಿರುದ್ಧದ FIR ರದ್ದು

ವಕ್ಫ್ ನೋಟಿಸ್ ನೀಡಿದ್ದಕ್ಕೆ ಹಾವೇರಿಯ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಟ್ವೀಟ್ ಮಾಡುವ ಮೂಲಕ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ಇಂದು ರದ್ದುಪಡಿಸಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಾದ-ಪ್ರತಿವಾದದ ಬಳಿಕ ತೀರ್ಪು ಕಾಯ್ದಿರಿಸಿತ್ತು. ಮೃತ ರೈತನ‌ ತಂದೆಯ ಹೇಳಿಕೆ ಆಧರಿಸಿ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದರು. ಪೊಲೀಸರ ಸ್ಪಷ್ಟನೆ ನಂತರ ಟ್ವೀಟ್ ಡಿಲೀಟ್ ಮಾಡಲಾಗಿದೆ. ಹೀಗಾಗಿ ಪ್ರಕರಣ ರದ್ದುಪಡಿಸುವಂತೆ ಹಿರಿಯ ವಕೀಲ ಅರುಣ್ ಶ್ಯಾಮ್ ವಾದಿಸಿದ್ದರು. ಮತ್ತೊಂಡೆದೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹುಟ್ಟಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

3. ಅತುಲ್ ಸುಭಾಷ್ ಆತ್ಮಹತ್ಯೆ; ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆ

ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಎರಡು ಕುಟುಂಬಗಳ ನಡುವೆ ಸಾವು, ಕಿರುಕುಳ, ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪ, ಪ್ರತ್ಯಾರೋಪಗಳು ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್ ಸಾವಿಗೂ ಮುನ್ನ ವಿಡಿಯೋ ಮಾಡಿ ತನಗಾದ ಕಿರುಕುಳದ ಬಗ್ಗೆ ಹೇಳಿಕೊಂಡು ತನ್ನ ಪತ್ನಿ ಹಾಗೂ ಅವರ ಕುಟುಂಬಸ್ಥರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡಿದ್ದರು. ಆದರೆ ಈ ಆರೋಪವನ್ನು ಅತುಲ್ ಪತ್ನಿ ಕಡೆಯವರು ನಿರಾಕರಿಸಿದ್ದಾರೆ. ಈ ಮಧ್ಯೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದು, ಅತುಲ್ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಿದ್ದಾರೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

4. ರಾಜ್ಯದಲ್ಲಿ ಇನ್ನು ಮೂರ್ನಾಲ್ಕು ದಿನ ಮಳೆ ಸಾಧ್ಯತೆ

ನೆರೆಯ ತಮಿಳುನಾಡು ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇದರ ಪ್ರಭಾವ ಬೆಂಗಳೂರಿನಲ್ಲೂ ಆಗುತ್ತಿದ್ದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಇದೇ ರೀತಿಯ ಹವಾಮಾನ ಇನ್ನೂ ಮೂರ್ನಾಲ್ಕು ದಿನ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

5. ಕೌಟುಂಬಿಕ ಕಲಹ: ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ತಾಯಿಯು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಕುಸುಮಾ ತನ್ನಿಬ್ಬರು ಮಕ್ಕಳಾದ ಶ್ರೀಯಾನ್ ಮತ್ತು ಚಾರ್ವಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಕೊಡಿಗೆಹಳ್ಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ದಂಪತಿ ಸುರೇಶ್, ಕುಸುಮಾ ವಾಸವಾಗಿದ್ದರು. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಸಿಕ್ಕಿದ್ದು, ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದಿದ್ದಾರೆ.

X

Advertisement

X
Kannada Prabha
www.kannadaprabha.com