
ಬೆಳಗಾವಿ: 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಸಂವಿಧಾನ ಬಾಹಿರ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಮಸಾಲಿ ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹೊಗಳುವ ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ನಮ್ಮ ಬೇಡಿಕೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುವ ಮೂಲಕ ಅದು ತಪ್ಪು ಎಂದು ಸಾಬೀತುಪಡಿಸುತ್ತಿದ್ದಾರೆ. ನಮ್ಮ ಹೋರಾಟ ಅಸಂವಿಧಾನಿಕವಾಗಿದ್ದರೆ ನಮ್ಮ ಹೋರಾಟದಲ್ಲಿ ಭಾಗವಹಿಸಿದ ಸಚಿವರನ್ನು ಅಮಾನತು ಮಾಡಿ. ನೀವು (ಸಿದ್ದರಾಮಯ್ಯ) ನಮಗೆ ಮೀಸಲಾತಿ ನೀಡಲು ಬಯಸದಿದ್ದರೆ, ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ನ್ಯಾಯ ಸಿಗಲು ಬೇರೆ ದಾರಿ ಹುಡುಕುತ್ತೇವೆ. ನಾವು ಜನರ ಬಳಿಗೆ ಹೋಗುತ್ತೇವೆಂದು ಹೇಳಿದರು.
ನಮ್ಮ ಹೋರಾಟವನ್ನು ಅಸಂವಿಧಾನಿಕ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ಸಮುದಾಯದವರನ್ನು ಹಾಗೂ ಬಸವಣ್ಣ ಅವರನ್ನು ಅವಮಾನಿಸಿದ್ದಾರೆ. ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಹೋರಾಟ ಮುಂದುವರೆಯಲಿದೆ ಎಂದ ಅವರು, ಇನ್ನು ಮುಂದೆ ಇದು ‘ಲಿಂಗಾಯತ ಪಂಚಮಸಾಲಿ ಮಿಸಲತಿ ಕ್ರಾಂತಿ ಹೋರಾಟ’ ಎಂದು ಕರೆಯಲಾಗುವುದು ಎಂದು ತಿಳಿಸಿದರು.
ಲಿಂಗಾಯತರು ಸಂವಿಧಾನವನ್ನು ಓದಿದ್ದಾರೆ. ಅದರಂತೆ ಸೇವೆಯನ್ನು ಮಾಡುತ್ತಿದ್ದಾರೆ. 2020ರಲ್ಲಿ ಮೀಸಲಾತಿಗಾಗಿ ಹೋರಾಟ ಆರಂಭಿಸಿದಾಗ ಕಾಂಗ್ರೆಸ್ ನಾಯಕರು ನಮಗೆ ಬೆಂಬಲ ನೀಡಿದ್ದರು. ಇದೀಗ ವಿರೋಧಿಸುತ್ತಿದ್ದಾರೆ. ಕಾನೂನು ವಿದ್ವಾಂಸರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಸರಿಹೊಂದುವುದಿಲ್ಲ ಎಂದು ಕಿಡಿಕಾರಿದರು.
Advertisement