
ಬೆಳಗಾವಿ: ವಿವಿಧ ಕಾರಣಗಳಿಂದ ಕಳೆದ ಒಂದು ವರ್ಷದಲ್ಲಿ ಯಾದಗಿರಿ ಜಿಲ್ಲೆಯಲ್ಲಿ 127 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗುರುಮಿಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸೋಮವಾರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ಶ್ರೀಮಂತರು ತಮ್ಮ ಮಕ್ಕಳಿಗೆ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಬಡ ಕುಟುಂಬದ ಮಕ್ಕಳು ಸಾವನ್ನಪ್ಪಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಸಾವನ್ನಪ್ಪಿವೆ ಎಂದು ಸದನಕ್ಕೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಆರೋಗ್ಯ ಸೌಕರ್ಯಗಳಿಂದ ವಂಚಿತವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 2,079 ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಭೀಮಾ ನದಿಯ ಉಪನದಿಯಾದ ಸೀನಾ ನದಿಯಿಂದ ನಮಗೆ ಒಂದು ಹನಿ ನೀರು ಸಿಗುತ್ತಿಲ್ಲ, ತ್ಯಾಜ್ಯ ನೀರನ್ನು ಮಾತ್ರ ಭೀಮಾಗೆ ಹರಿಸಲಾಗುತ್ತಿದೆ. ಇದರಿಂದ ನಮಗೆ ನೀರಿನಿಂದ ಹರಡುವ ಹಲವಾರು ರೋಗಗಳು ಬರುತ್ತಿವೆ.
ಈ ಬಗ್ಗೆ ಕೇಂದ್ರ ಜಲ ಆಯೋಗಕ್ಕೆ ಸರಕಾರ ಏಕೆ ದೂರು ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಪ್ರಶ್ನಿಸಿದರು. ಕಲಬುರಗಿ ನಗರದ ನೀರಿನ ಅಗತ್ಯತೆಗಳನ್ನು ಪೂರೈಸಲು ಕನಿಷ್ಠ ನಾಲ್ಕು ದೊಡ್ಡ ಕೆರೆಗಳನ್ನು ನಿರ್ಮಿಸಬೇಕು. ರಾಜ್ಯದ ಸಾಂಪ್ರದಾಯಿಕ ನೇಕಾರರಿಗೆ ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲು ಶಾಲಾ ಸಮವಸ್ತ್ರದ ಗುತ್ತಿಗೆ ನೀಡಬೇಕೆಂದು ಗುಲ್ಬರ್ಗ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದರು.
ಹಾನಗಲ್ ಕ್ಷೇತ್ರದಲ್ಲಿ ಸರಿಯಾದ ಬಸ್ ಸೇವೆ ಇಲ್ಲದಿರುವುದು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರ ವ್ಯಾಸಂಗದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮತ್ತೋರ್ವ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು. ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಹೆಚ್ಚಿನ ಕೈಗಾರಿಕೆ ಸ್ಥಾಪಿಸಬೇಕು ಎಂದು ಸದನದಲ್ಲಿ ಮಾತನಾಡಿದ ಎಲ್ಲಾ ಶಾಸಕರು ಸರ್ವಾನುಮತದಿಂದ ಸರ್ಕಾರವನ್ನು ಒತ್ತಾಯಿಸಿದರು.
Advertisement