News Headlines 17-12-24 | BJP ಸಭಾತ್ಯಾಗದ ನಡುವೆ ವಿಶ್ವವಿದ್ಯಾಲಯ(ತಿದ್ದುಪಡಿ) ಮಸೂದೆ ಅಂಗೀಕಾರ; CCB ಭರ್ಜರಿ ಬೇಟೆ: 24 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ; ಅಪಘಾತದಲ್ಲಿ PWD ಅಧಿಕಾರಿಗಳು ಸಾವು!

News Headlines 17-12-24 | BJP ಸಭಾತ್ಯಾಗದ ನಡುವೆ ವಿಶ್ವವಿದ್ಯಾಲಯ(ತಿದ್ದುಪಡಿ) ಮಸೂದೆ ಅಂಗೀಕಾರ; CCB ಭರ್ಜರಿ ಬೇಟೆ: 24 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ; ಅಪಘಾತದಲ್ಲಿ PWD ಅಧಿಕಾರಿಗಳು ಸಾವು!

1. ಬೆಳಗಾವಿ ಅಧಿವೇಶನ: BJP ಸಭಾತ್ಯಾಗದ ನಡುವೆ ವಿಶ್ವವಿದ್ಯಾಲಯ(ತಿದ್ದುಪಡಿ) ಮಸೂದೆಗೆ ಅಂಗೀಕಾರ

ಬೆಳಗಾವಿ ವಿಧಾನಸಭೆ ಅಧಿವೇಶನದ ವೇಳೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಇಂದು ಸಭಾತ್ಯಾಗ ಮಾಡಿದೆ. 'ಉತ್ತಮ ಆಡಳಿತ ಮತ್ತು ಕಾರ್ಯನಿರ್ವಹಣೆ ಹೆಸರಲ್ಲಿ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯನ್ನು ಕುಲಪತಿಯನ್ನಾಗಿ ಬದಲಾಯಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿ ಸಭಾತ್ಯಾಗ ಮಾಡಿದರು. ಬಿಜೆಪಿ ಶಾಸಕರ ಸಭಾತ್ಯಾಗ ನಡುವೆ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡಿದೆ. ಇದಕ್ಕೂ ಮುನ್ನ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಉತ್ತರ ಕರ್ನಾಟಕ ಭಾಗದ ಶಾಸಕರು ಹಲವು ಪ್ರಮುಖ ಅಭಿವೃದ್ಧಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು, ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳ ನೇಮಕಾತಿ ಮತ್ತು ಸ್ಥಾಪನೆಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

2. CCB ಪೊಲೀಸರ ಭರ್ಜರಿ ಬೇಟೆ: ನೈಜೀರಿಯ ಮಹಿಳೆ ಬಂಧನ, 24 ಕೋಟಿ ಮೌಲ್ಯದ ಡ್ರಗ್ಸ್ ವಶ

ಡ್ರಗ್ಸ್ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ. ಬೆಂಗಳೂರಿನಲ್ಲಿ ವಿದೇಶಿ ಮಹಿಳೆಯೊಬ್ಬರಿಂದ 24 ಕೋಟಿ ಮೌಲ್ಯದ 12 ಕೆಜಿ ನಿಷೇಧಿದ MDMA ಕ್ರಿಸ್ಟಲ್ ಅನ್ನು CCB ಮಾದಕ ದ್ರವ್ಯ ನಿಗ್ರಹ ದಳ ಜಪ್ತಿ ಮಾಡಿದೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕೆ.ಆರ್‌.ಪುರಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ 40 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ವಿದೇಶಿ ಮಹಿಳೆಯಿಂದ 12 ಕೆಜಿ ನಿಷೇಧಿದ ಎಂಡಿಎಂಎ, ಒಂದು ಮೊಬೈಲ್, 70 ಏರ್ಟೆಲ್ ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ. ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

3. ಲಾರಿ ಪಲ್ಟಿಯಾಗಿ ಮೂವರು PWD ಅಧಿಕಾರಿಗಳು ಸಾವು

ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತವರ ಮೇಲೆ ಚೀಲಗಳು ಬಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಸಿಂಧನೂರಿನ ಪಿಡಬ್ಲ್ಯೂಡಿ ಸಮೀಪ ಡಾಲರ್ಸ್ ಕಾಲೋನಿ ಕ್ರಾಸ್ ಬಳಿ ದುರ್ಘಟನೆ ನಡೆದಿದ್ದು ಮೃತರನ್ನು ಜವಳಗೇರಾ ಉಪವಿಭಾಗದ ಕಿರಿಯ ಎಂಜಿನಿಯರ್ ಗಳಾದ ಮಲ್ಲಿಕಾರ್ಜುನ, ಶಿವರಾಜು, ಮೆಹಬೂಬ ಎಂಬುವವರು ಮೃತಪಟ್ಟಿದ್ದಾರೆ. ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಮೂವರು ಮಾತನಾಡುತ್ತಾ ನಿಂತಿದ್ದಾಗ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

4. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ FIRಗೆ ಹೈಕೋರ್ಟ್ ತಡೆ

ಮುಡಾ ಪ್ರಕರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಡದ ಕಾರ್ಯದರ್ಶಿ ರೂಪ ಅವರು ನೀಡಿದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್, ಚಾಮುಂಡಿಬೆಟ್ಟದ ಕಾರ್ಯದರ್ಶಿ ರೂಪಾ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಚಾಮುಂಡೇಶ್ವರಿ ದೇವಿಗೆ ಬಂದಿರುವ ಹರಕೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಇಂದು ವಿಚಾರಣೆ ವೇಳೆ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ದೇವಿಗೆ ಹಾಕಿದ್ದ ಸೀರೆ ಮಾರಾಟವಾಗಿದ್ದರೆ ಅಕ್ಷಮ್ಯ ಎಂದು ನ್ಯಾಯಮೂರ್ತಿ ಎಂ‌. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

5. ಚುನಾವಣಾ ಬಾಂಡ್ ಅಕ್ರಮ: ವಿಜಯೇಂದ್ರ ವಿರುದ್ಧ ದಾಖಲಾಗಿದ್ದ FIR ರದ್ದು

ಚುನಾವಣಾ ಬಾಂಡ್ ಗಳ ನೆಪದಲ್ಲಿ ಹಣ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ದಾಖಲಾಗಿದ್ದ FIR ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸಾಮಾಜಿಕ ಹೋರಾಟಗಾರ ಆದರ್ಶ ಅಯ್ಯರ್ ಎಂಬುವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ಸೆಪ್ಟೆಂಬರ್ ನಲ್ಲಿ ಎಫ್ ಐಆರ್ ದಾಖಲಿಸಿದ್ದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು ಹಾಗೂ ಬಿಜೆಪಿ ರಾಷ್ಟ್ರ ರಾಜ್ಯ ಮಟ್ಟದ ಪದಾಧಿಕಾರಿಗಳ ವಿರುದ್ದವೂ ದಾಖಲಾಗಿದ್ದ ಎಫ್ ಐಆರ್ ಅನ್ನು ಡಿಸೆಂಬರ್ 3ರಂದು ಹೈಕೋರ್ಟ್ ರದ್ದುಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com