
ಬೆಳಗಾವಿ: ರಾಜ್ಯದ ವಿದ್ಯುತ್ ನಿಗಮಗಳಲ್ಲಿ 260 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಅವರು ಬುಧವಾರ ಆರೋಪಿಸಿದರು.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಕಾರಣಗಳ ನೀಡಿ ಸದನದಲ್ಲಿ ಪ್ರತಿಪಕ್ಷಗಳು ಹಗರಣಗಳನ್ನು ಬಯಲಿಗೆಳೆಯದಂತೆ ಮಾಡಲಾಗುತ್ತಿದೆ. ಪರಿಷತ್ತಿನಲ್ಲಿ ನಿರ್ಣಯ ಮಂಡಿಸಿದಾಗ ತಾಂತ್ರಿಕ ಕಾರಣ ನೀಡಿ ಪ್ರತಿಪಕ್ಷಗಳು ವಿಷಯ ಪ್ರಸ್ತಾಪಿಸದಂತೆ ತಡೆಯುತ್ತಿದ್ದಾರೆ. ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಆಗಲಿಲ್ಲ. ಕಿತ್ತೂರು ಕರ್ನಾಟಕ ಸಮಗ್ರ ಕರ್ನಾಟಕ ಕುರಿತು ಚರ್ಚೆ ಮಾಡಲಿಲ್ಲ. ಚಳಿಗಾಲದ ಅಧಿವೇಶನ ಅತೃಪ್ತಿ ತಂದಿದೆ ಎಂದು ಕಿಡಿಕಾರಿದರು.
ಕೆಐಡಿಬಿಯಲ್ಲಿ ಭ್ರಷ್ಟಾಚಾರ ಆಗಿದೆ. ಅದನ್ನು ತನಿಖೆ ಮಾಡುತ್ತಿಲ್ಲ. ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಬೇಕಾದವರಿಗೆ ಸೈಟ್ ಹಂಚಿಕೆ ಮಾಡಿದ್ದಾರೆ. ಖಾಲಿ ಜಾಗ ಅವರ ಬುಟ್ಟಿಗೆ ಹಾಕಿದ್ದಾರೆ. ರಾಯಚೂರು ಘಟಕದ ಟೆಂಡರ್ ನಲ್ಲಿ ರೂ.128 ಕೋಟಿ, ಬಳ್ಳಾರಿ ಘಟಕದಲ್ಲಿ 140 ಕೋಟಿ ರೂ ಹಗರಣ ನಡೆದಿದೆ. ಈ ಎರಡು ಟೆಂಡರ್ ಅಂತರಾಷ್ಟ್ರೀಯ ಟೆಂಡರ್ ಅಡಿ ಬರುತ್ತದೆ. ಆದರೆ, ಸರ್ಕಾರ ಟೆಂಡರ್ ಗಳನನು ನಾಲ್ಕು ಟೆಂಡರ್ ಆಗಿ ಪರಿವರ್ತಿಸಿದೆ. ಕಾಮಗಾರಿಯ ಅಂದಾಜು ವೆಚ್ಚವನ್ನು ಹೆಚ್ಚಿಸಲಾಗಿದೆ. ವೆಲ್ಡಿಂಗ್, ಪೇಯಿಂಟಿಂಗ್ ಹಾನಿ ನಿಯಂತ್ರಣಕ್ಕೆ ರೂ.30 ಕೋಟಿ ಬದಲು 128 ಕೋಟಿ ರೂ.ಕೊಟ್ಟಿದ್ದಾರೆಂದು ಆರೋಪಿಸಿದರು.
ಎಸ್ ಪ್ರಿನ್ಸ್ ಹೈಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ರೂ.41.22 ಕೋಟಿ, ರೂ.38.12 ಕೋಟಿ ಟೆಂಡರ್ ಕೊಡಲಾಗಿದೆ. ಮತ್ತೊಂದು ಕಂಪನಿಗೆ ರೂ.24.76 ಕೋಟಿ ಹಾಗೂ ರೂ.34.25 ಕೋಟಿ ಟೆಂಡರ್ ನೀಡಲಾಗಿದೆ. ಆದರೆ, ಟೆಂಡರ್ ಹಾಕಿದ ಎಲ್ಲರೂ ಒಂದೇ ಕಂಪನಿಯವರಾಗಿದ್ದು, ದುಡ್ಡು ಹೊಡೆಯುವ ಕೆಲಸ ಮಾಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಸೆ.8 ರಂದು ಪತ್ರ ಬರೆದು ಟೆಂಡರ್ ಪ್ರಕ್ರಿಯೆ ರದ್ದುಪಡಿಸುವಂತೆ ಹಾಗೂ ಟೆಂಡರ್ ಪರಿಶೀಲಿಸುವಂತ ಇಂಧನ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಟೆಂಡರ್ ನೀಡಿದ 4 ದಿನಗಳ ಬಳಿಕ ಮುಖ್ಯ ಎಂಜಿನಿಯರ್ ಕರೆಯಲ್ಲಿ ಸಭೆ ನಡೆದಿದೆ. ಒಂದೇ ಕಂಪನಿಗೆ ನಾಲ್ಕು ಭಾಗಗಳಲ್ಲಿ ಟೆಂಡರ್ ನೀಡಿ ಎರಡು ತಿಂಗಳೊಳಗೆ ಕಂಪನಿಯ ಗುತ್ತಿಗೆದಾರರಿಗೆ 40 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು. ಇದು ಅಚ್ಚರಿ ಮೂಡಿಸಿದೆ.
ಮತ್ತೊಂದೆಡೆ ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರು ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಿದ್ದರೂ ಇನ್ನೂ ಹಲವರ ಬಾಕಿ ಬಿಲ್‌ಗಳನ್ನು ಸರ್ಕಾರ ತೆರವುಗೊಳಿಸಿಲ್ಲ. ಹಿಂದೆ ಎಚ್.ಕೆ.ಪಾಟೀಲ್ ಅವರು ಇಂಧನ ಸಚಿವರಾಗಿದ್ದಾಗ ಬೇರೆ ಬೇರೆ ಕಡೆ ಇದೇ ರೀತಿ ಟೆಂಡರ್ ಹಂಚಿಕೆ ಮಾಡಿದ್ದ ಅಧಿಕಾರಿಗಳನ್ನು ಅಮಾನತು ಮಾಡಿದ್ದರು,
ಪ್ರಭಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ನಿರ್ದೇಶಕರು ಈ ಟೆಂಡರ್‌ಗಳಿಗೆ ಆದೇಶಗಳನ್ನು ನೀಡಿದ್ದಾರೆ. ಈಗಾಗಲೇ ಸೇವೆಯಿಂದ ನಿವೃತ್ತರಾಗಿರುವ ಎಲ್ಲಾ ಹೊರಗುತ್ತಿಗೆ ನೌಕರರು ಮತ್ತು ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಸಿಎಂ ಈ ವರ್ಷದ ಜನವರಿಯಲ್ಲಿ ಆದೇಶ ಹೊರಡಿಸಿದ್ದಾರೆ. ಆದರೆ, ಪ್ರಭಾರಿ ಹೊರಗುತ್ತಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ ಆರ್.ನಾಗರಾಜ್ ಅವರು ಟೆಂಡರ್‌ಗಳನ್ನು ನೀಡಿರುವುದು ಹೇಗೆ? ಸಿಎಂ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೆ ಬಾರದೆ ಇಂತಹ ಹಗರಣ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ ಮತ್ತು ಜಾರ್ಜ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
Advertisement